ಬ್ರಾಂಡ್‌ ಶಿವಮೊಗ್ಗಕ್ಕಾಗಿ ನಮ್ಮ ನಡಿಗೆ ಶಾಂತಿ ಕಡೆಗೆ, ಹೇಗಿತ್ತು ಮೆರವಣಿಗೆ? ಯಾರೆಲ್ಲ ಪಾಲ್ಗೊಂಡಿದ್ದರು?

ಶಿವಮೊಗ್ಗ: ವಿವಿಧ ಸಂಘಟನೆಗಳು ಜೆನ್ ಜಿ ಕಣ್ಣಲ್ಲಿ ಬ್ರಾಂಡ್ ಶಿವಮೊಗ್ಗ ಶೀರ್ಷಿಕೆ ಯಡಿ ಗುರುವಾರ ನಮ್ಮ ನಡಿಗೆ ಶಾಂತಿ ಕಡೆಗೆ ಮೆರವಣಿಗೆ ನಡೆಸಿದವು. ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಮೆರವಣಿಗೆಗೆ ಚಾಲನೆ ನೀಡಿದರು.

ನಗರದಲ್ಲಿ ಹಬ್ಬಗಳ ಋತುವಿನ ಮುನ್ನ ಸೌಹಾರ್ದತೆಯ ಸಂದೇಶ ಸಾರುವ ಉದ್ದೇಶದಿಂದ ಪ್ರಗತಿಪರ ಸಂಘಟನೆಗಳು ಕಳೆದ ನಾಲ್ಕು ವರ್ಷಗಳಿಂದ ಶಾಂತಿ ಮೆರವಣಿಗೆ ಆಯೋಜಿಸುತ್ತಾ ಬಂದಿವೆ. ನಗರದ ಡಾ. ಅಂಬೇಡ್ಕರ್‌ ಭವನದಿಂದ ಆರಂಭವಾದ ಮೆರವಣಿಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ನಡೆಯಿತು.

Gen-Z-Shanthigagi-Nadige-in-Shivamogga-city

ಎಲ್ಲರೂ ಒಂದಾಗಿ ಬಾಳುವುದೇ ಭಾರತ ದೇಶದ ಸೊಗಸು. ಅದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಆಯೋಜಿಸಿರುವ ಇಂತಹ ಶಾಂತಿ ನಡಿಗೆ ಕಾರ್ಯಕ್ರಮ ದೇಶಕ್ಕೆ ಮಾದರಿ. ಎಲ್ಲರೂ ಒಂದಾಗಿದ್ದರೆ ನಾಡು ಸಮೃದ್ಧಿಯಾಗಿರುತ್ತದೆ. ಜನರೂ ನೆಮ್ಮದಿಯಿಂದ ಇರುತ್ತಾರೆ. ಅದಕ್ಕಾಗಿ ಸಮಾನ ಮನಸ್ಕರು ಸೇರಿ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿರುವುದು ಉತ್ತಮ ನಡೆ.

– ಬಿ.ನಿಖಿಲ್‌, ಜಿಲ್ಲಾ ರಕ್ಷಣಾಧಿಕಾರಿ

ಆಕರ್ಷಕ ಘೋಷಣಾ ಫಲಕ

ಮೆರವಣಿಗೆಯಲ್ಲಿ ಪ್ರದರ್ಶಿಸಿದ ಘೋಷಣಾ ಫಲಕಗಳು ಜನರನ್ನು ಸೆಳೆದವು. ಶಿವಮೊಗ್ಗ ನಮ್ಮ ಜವಾಬ್ದಾರಿ, 2040 ಶಿವಮೊಗ್ಗ ಹೊಸ ಹೆಜ್ಜೆ, ಇಂದಿನ ಯುವಶಕ್ತಿ ನಾಳೆಯ ಶಿವಮೊಗ್ಗ, ಪ್ರಕೃತಿ ಉಳಿಸಿ ಭವಿಷ್ಯ ಬೆಳೆಸಿ, ಹೀಗೆ ವಿವಿಧ ಘೋಷಣೆಗಳನ್ನು ಒಳಗೊಂಡ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಜನರು ಪಾಲ್ಗೊಂಡಿದ್ದರು.

ರಾಮಣ್ಣ ಶ್ರೇಷ್ಠಿ ಪಾರ್ಕ್‌ ಸರ್ಕಲ್‌ನಲ್ಲಿ ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜು ವಿದ್ಯಾರ್ಥಿಗಳು ‘ಕೋಮು ಸೌಹಾರ್ದತೆ’ ಬಗ್ಗೆ ಹಾಗೂ ಸಹ್ಯಾದ್ರಿ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ‘ಹೆಚ್‌ಐವಿ ಏಡ್ಸ್’ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿದರು.

ಶಿವಮೊಗ್ಗ ಬಸವಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ, ಫಾದರ್ ಪಿಯುಸ್ ಡಿಸೋಜ, ಫಾದರ್ ಪ್ರಾಂಕ್ಲಿನ್ ಡಿಸೋಜ, ಫಾದರ್ ಸಂತೋಷ್ ಪಿರೇರಾ, ಫಾದರ್ ಅಬ್ರಹಾಂ, ಫಾದರ್ ಗ್ಯಾನ್ಸನ್ ಡಿಸೋಜ, ಸಿಸ್ಟರ್ ಮಿನಿ ಜೋಸೆಫ್, ಸಿಸ್ಟರ್ ದೀಪ್ತಿ, ಸಿಸ್ಟರ್ ರಿಂಕಿ, ಇಮಾಮ್ ಜಾಮಿಯಾ ಮಜೀದ್‌ನ ಮುಫ್ತಿ ಗುಲಾಮ್ ಬರ್ಕಾತಿ, ಮದರಸ ಮಜಹರ್ ಉಲೂಮ್‌ನ ಮುಷ್ಟಿ ಸೈಯದ್ ಮುಜಿಬುಲ್ಲ ರಶಾದಿ, ಆಲ್ ಇಂಡಿಯಾ ಮಿಲಿ ಕೌನ್ಸಿಲ್ ಅಧ್ಯಕ್ಷ ಮುಫ್ತಿ ಸಫಿ ಉಲ್ಲಾ ಖಾಸ್ಮಿ, ಮೌಲಾನಾ ಶಾಹುಲ್ ಹಮೀದ್, ಪ್ರಮುಖರಾದ ಸಿ.ಎಸ್. ಷಡಾಕ್ಷರಿ, ಕೆ.ಪಿ. ಶ್ರೀಪಾಲ್, ಹೆಚ್.ಆರ್.ಬಸವರಾಜಪ್ಪ, ಕಿರಣ್ ಕುಮಾರ್, ಎಂ. ಗುರುಮೂರ್ತಿ, ಕೆ.ಎಲ್. ಅಶೋಕ್, ಜಾಮೀಯಾ ಮಸೀದಿ ಮೌಲ್ವಿಗಳು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ