ಶಿವಮೊಗ್ಗ: ಬೆಂಗಳೂರಿನ ಕೋರಮಂಗಲದ ಕ್ರೀಡಾಂಗಣದಲ್ಲಿ ಸೆ.16ರಿಂದ 19ರವರೆಗೆ ಏರ್ಪಡಿಸಿದ್ದ ಸೌತ್ ಇಂಡಿಯಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಶಿವಮೊಗ್ಗದ ಆರ್.ಮೀನಾಕ್ಷಿ 60-65 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ ಎಂದು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ ವಿನೋದ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿನೋದ್, ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಪ್ರತಿನಿಧಿಸಿದ್ದ ಮೀನಾಕ್ಷಿ ವಿಶೇಷ ಸಾಧನೆ ಮಾಡಿದ್ದಾರೆ. ಸೌತ್ ಇಂಡಿಯಾ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯವರಿಗೆ ಪದಕ ಬಂದಿರುವುದು ಇದೇ ಮೊದಲು ಎಂದು ಹೇಳಿದರು.

ಮೀನಾಕ್ಷಿ ಅವರು ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಸ್ಎಐ) ಎನ್ಐಎಸ್ ತರಬೇತಿ ಪಡೆದ ಜಿಲ್ಲೆಯ ಮೊದಲ ಬಾಕ್ಸಿಂಗ್ ಕೋಚ್. ಶಿವಮೊಗ್ಗ ಜಿಲ್ಲಾ ಬಾಕ್ಸಿಂಗ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕೋಚ್, ರಾಜ್ಯ ಮಹಿಳಾ ಬಾಕ್ಸಿಂಗ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಬಾಕ್ಸಿಂಗ್ಪಟು ಆರ್.ಮೀನಾಕ್ಷಿ, ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಖಜಾಂಚಿ ಅನೂಪ್ ಆರ್. ಶೇಖರ್, ರಾಜ್ಯ ಬಾಕ್ಸಿಂಗ್ ತೀರ್ಪುಗಾರ ಮಲ್ಲಿಕಾರ್ಜುನ್, ಪ್ರಕೃತಿ ಆರ್. ಗೌಡರ್ ಸುದ್ದಿಗೋಷ್ಠಿಯಲ್ಲಿದ್ದರು.