ಶಿವಮೊಗ್ಗ: ಆಟೋ ಚಾಲಕರು ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವ ದೂರುಗಳ ಹಿನ್ನೆಲೆ ನಗರದ ರೈಲ್ವೆ ನಿಲ್ದಾಣದ ಪ್ರೀ-ಪೇಯ್ಡ್ ಆಟೋ ಕೌಂಟರ್ನಲ್ಲಿ ಶಿವಮೊಗ್ಗ ಸಂಚಾರ ಪೊಲೀಸರು ಬೆಳಗಿನ ಜಾವ ದಿಢೀರ್ ತಪಾಸಣೆ ನಡೆಸಿದರು.
ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಪ್ರಯಾಣಿಸಿದ ನಂತರ, ಕೆಲವು ಚಾಲಕರು ಪ್ರೀ-ಪೇಯ್ಡ್ ಟಿಕೆಟ್ ದರಕ್ಕಿಂತ ಹೆಚ್ಚುವರಿ ಹಣ ಪಾವತಿಸುವಂತೆ ಒತ್ತಾಯಿಸುತ್ತಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದ್ದವು. ಈ ಹಿನ್ನೆಲೆ ಬೆಳಿಗ್ಗೆ 4:30ಕ್ಕೆ ರೈಲ್ವೆ ನಿಲ್ದಾಣದ ಆಟೋ ಕೌಂಟರ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ ಆಟೋಗಳನ್ನು ಪರಿಶೀಲಿಸಿದರು. ಪ್ರೀ-ಪೇಯ್ಡ್ ಟಿಕೆಟ್ನಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ಪಡೆಯಬಾರದು ಎಂದು ಆಟೋ ಚಾಲಕರಿಗೆ ಎಚ್ಚರಿಕೆ ನೀಡಲಾಯಿತು.

ಇದೇ ವೇಳೆ, ಬೆಂಗಳೂರು–ತಾಳಗುಪ್ಪ ರೈಲಿನಲ್ಲಿ ಆಗಮಿಸಿದ ಪ್ರಯಾಣಿಕರು ಒಟ್ಟು 112 ಪ್ರೀ-ಪೇಯ್ಡ್ ಆಟೋ ಟಿಕೆಟ್ಗಳನ್ನು ಪಡೆದು ಪ್ರಯಾಣಿಸಿದರು. ಪ್ರಯಾಣಿಕರು ಪ್ರೀ-ಪೇಯ್ಡ್ ಕೌಂಟರ್ನಿಂದಲೇ ಟಿಕೆಟ್ ಪಡೆದು ಸುರಕ್ಷಿತವಾಗಿ ಹಾಗೂ ಪಾರದರ್ಶಕ ದರದಲ್ಲಿ ಪ್ರಯಾಣಿಸುವಂತೆ ಜಾಗೃತಿ ಮೂಡಿಸಲಾಯಿತು. ಶಿವಮೊಗ್ಗ ಸಂಚಾರ ಠಾಣೆ ಇನ್ಸ್ಪೆಕ್ಟರ್ ದೇವರಾಜ್ ಟಿ.ವಿ., ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಹೆಚ್.ಎನ್. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.