ಶಿವಮೊಗ್ಗ: ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಕೋಮಾ ಸ್ಥಿತಿಗೆ ಜಾರಿದ್ದಾರೆ. ನಗರದ ಎನ್.ಟಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಪಂಚವಟಿ ಕಾಲೋನಿಯ ನಿವಾಸಿ ಗಿರೀಶ್ ಬಾಬು.ಎಂ.ಕೆ. (41) ಗಾಯಗೊಂಡವರು. ಗಿರೀಶ್ ಬಾಬು ಅವರು ಎನ್‌ಟಿ ರಸ್ತೆಯನ್ನು ದಾಟಿ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಸಂದೇಶ್ ಮೋಟಾರ್ಸ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಬೈಕ್ ಗಿರೀಶ್ ಬಾಬು ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಿರೀಶ್ ಬಾಬು ಅವರ ತಲೆಗೆ ಪೆಟ್ಟು ಬಿದ್ದು, ಕಿವಿಯಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಕೋಮಾ ಸ್ಥಿತಿಗೆ ಜಾರಿದ್ದರು.

ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಬೈಕ್ ಸವಾರ ಇಮ್ರಾನ್ ಎಂಬಾತನ ವಿರುದ್ಧ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.