ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನವೆಂಬರ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ವಿವಿಧ ಕಲಾಪ್ರಕಾರಗಳ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಹೆಚ್ ತಿಳಿಸಿದ್ದಾರೆ.
ಬಾಲಪ್ರತಿಭೆ (8 ರಿಂದ 13 ವರ್ಷ), ಕಿಶೋರ ಪ್ರತಿಭೆ (14 ರಿಂದ 18 ವರ್ಷ) ಹಾಗೂ ಯುವ ಪ್ರತಿಭೆ (19 ರಿಂದ 30 ವರ್ಷ) ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಬಾಲಪ್ರತಿಭೆ ಮತ್ತು ಕಿಶೋರ ಪ್ರತಿಭೆ ವಿಭಾಗಗಳಲ್ಲಿ ಶಾಸ್ತ್ರೀಯ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಚಿತ್ರಕಲೆ, ಜನಪದ ಗೀತೆ ಮತ್ತು ಹಿಂದೂಸ್ತಾನಿ ವಾದ್ಯ ಸಂಗೀತ ಸ್ಪರ್ಧೆಗಳು ಜರುಗಲಿವೆ.

ಯುವ ಪ್ರತಿಭೆ ವಿಭಾಗದಡಿ ಏಕವ್ಯಕ್ತಿ ಸ್ಪರ್ಧೆಗಳಾಗಿ ಆಶುಭಾಷಣ, ಶಾಸ್ತ್ರೀಯ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಜನಪದ ಗೀತೆ ಹಾಗೂ ಸಮೂಹ ಸ್ಪರ್ಧೆಗಳಾಗಿ ಜನಪದ ನೃತ್ಯ ಮತ್ತು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಏನೆಲ್ಲ ಕಂಡೀಷನ್‌ಗಳಿವೆ?
ವಯಸ್ಸಿನ ದೃಢೀಕರಣಕ್ಕಾಗಿ ಶಾಲೆ ಅಥವಾ ಕಾಲೇಜಿನ ದೃಢೀಕರಣ ಪತ್ರ ಸಲ್ಲಿಸಬೇಕು. ವಿದ್ಯಾರ್ಥಿಗಳಲ್ಲದಿದ್ದಲ್ಲಿ ನಗರಸಭೆ ಅಥವಾ ಪಂಚಾಯತಿಯಿಂದ ಪಡೆದ ದೃಢೀಕರಣ ಪತ್ರ ಲಗತ್ತಿಸುವುದು ಕಡ್ಡಾಯ. ಒಬ್ಬ ಅಭ್ಯರ್ಥಿಗೆ ಕೇವಲ ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಕಳೆದ ಬಾರಿ ರಾಜ್ಯಮಟ್ಟದಲ್ಲಿ ವಿಜೇತರಾದ ಅಭ್ಯರ್ಥಿಗಳು ಈ ಬಾರಿ ಭಾಗವಹಿಸುವಂತಿಲ್ಲ.
ಜನಪದ ನೃತ್ಯ ವಿಭಾಗದಲ್ಲಿ ಸಿದ್ದಿ ಡಮಾಮಿ, ಡೊಳ್ಳು, ಗೊರವರ, ಗೋರುಕಾನ, ಜಗ್ಗಲಿಗೆ, ಕಂಗೀಲು, ಸೋಮನಕುಣಿತ, ಪಟಕುಣಿತ, ಕಂಸಾಳೆ, ಪೂಜಾಕುಣಿತ, ಜಡೆ ಕೋಲಾಟ, ಲಂಬಾಣಿ, ಕರಡಿ ಮಜಲು, ಕೊಡವ ನೃತ್ಯ ಮುಂತಾದ ಸಾಂಪ್ರದಾಯಿಕ ಕುಣಿತಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರೆಕಾರ್ಡೆಡ್ ಜನಪದ ಗೀತೆಗಳ ಹಾಡುಗಳಿಗೆ ನೃತ್ಯ ಮಾಡುವುದನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 31ರ ಸಂಜೆ 5.30ರ ಒಳಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ ಈ ವಿಳಾಸಕ್ಕೆ ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.