ಸಿಗಂದೂರು: ಇಲ್ಲಿನ ಚೌಡೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್.ಹೆಚ್.ಆರ್. ತಿಳಿಸಿದ್ದಾರೆ.
ನವರಾತ್ರಿ ಉತ್ಸವದ ಸಂದರ್ಭ ಪ್ರತಿದಿನ ಮುಂಜಾನೆ 4.30ರಿಂದ ತೈಲಾಭಿಷೇಕ, ಶೈಲಪುತ್ರಿ ಹಾಗೂ ಬ್ರಹ್ಮಚಾರಿಣಿ ಆರಾಧನೆ, ಗುರುಗಳ ಆರಾಧನೆ, ಗಣಹೋಮ, ಕುಂಕುಮಾರ್ಚನೆ, ಪಂಚಾಮೃತಾಭಿಷೇಕ, ಮಹಾಭಿಷೇಕ ಮತ್ತು ಅಲಂಕಾರ ಪೂಜೆ ನಡೆಯಲಿವೆ. ದುರ್ಗಾ ಹವನ, ಚಂಡಿಕಾ ಹೋಮ ನೆರವೇರಲಿವೆ.

ಪ್ರತಿದಿನ ಮಧ್ಯಾಹ್ನ 12.30ಕ್ಕೆ ನೈವೇದ್ಯ, ಸಂಜೆ 7ಕ್ಕೆ ದುರ್ಗಾ ಪೂಜೆ, 7.30ಕ್ಕೆ ದೀಪೋತ್ಸವ, ರಾತ್ರಿ 8ಕ್ಕೆ ಅಷ್ಟಾವಧಾನ ಸೇವೆ ಹಾಗೂ ಮಂಗಳಾರತಿ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳು ಧರ್ಮಾಧಿಕಾರಿ ಎಸ್. ರಾಮಪ್ಪ ನೇತೃತ್ವದಲ್ಲಿ ಜರುಗಲಿವೆ.
ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ರಂಗ ಶಿಕ್ಷಣದತ್ತ ಯೋಜನೆ ಅಡಿ ಈ ಬಾರಿ ನವರಾತ್ರಿಯಲ್ಲಿ 10 ಸರ್ಕಾರಿ ಶಾಲೆಗಳ ಒಟ್ಟು 210 ವಿದ್ಯಾರ್ಥಿಗಳಿಂದ ಪ್ರತಿದಿನ ರಾತ್ರಿ 7 ರಿಂದ 8 ವರೆಗೆ ರಂಗ ನವರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ. ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ನೆಲದ ಹತ್ತು ಕಥೆಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ವಿದ್ಯಾರ್ಥಿಗಳು ರಂಗರೂಪ ನೀಡಲಿದ್ದಾರೆ. ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತರಿಗೆ ವಸತಿ, ದೇವಿಯ ದರ್ಶನ ಹಾಗೂ ನಿತ್ಯ ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರವಿಕುಮಾರ್ ಹೆಚ್.ಆರ್. ಹೇಳಿದ್ದಾರೆ.