ರಾತ್ರಿ ಗದ್ದೆಯಲ್ಲಿ ಕಾಣಿಸ್ತು ಬ್ಯಾಟರಿ ಬೆಳಕು, ಬೆಳಿಗ್ಗೆ ಪರಿಶೀಲಿಸಿದಾಗ ಸುಟ್ಟು ಹೋಗಿದೆ ಪೈರು

ಹೊಸನಗರ: ಮೂರು ಎಕರೆ ಭತ್ತದ ಗದ್ದೆಗೆ ದುಷ್ಕರ್ಮಿಗಳು ಕಳೆನಾಶಕ ಹೊಡೆದಿದ್ದರಿಂದ ಪೈರು ಸುಟ್ಟುಹೋಗಿದೆ. ಹೊಸನಗರ ತಾಲ್ಲೂಕಿನ ಬೈಸೆ ಗ್ರಾಮದ ಬಂಗ್ಲೆಗದ್ದೆಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿದು ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಘಟನೆ ಸಂಬಂಧ ಗದ್ದೆ ಮಾಲೀಕ ಬ್ಲಾನಿ ಸಿಕ್ವೇರಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಎರಡು ತಿಂಗಳ ಹಿಂದೆ ಜಮೀನಿನಲ್ಲಿ‌ ಭತ್ತದ ನಾಟಿ ಮಾಡಲಾಗಿತ್ತು. ಇದಕ್ಕೆ ಅಂದಾಜು ₹2 ಲಕ್ಷ ವೆಚ್ಚವಾಗಿದೆ. ಅ.11 ರಂದು ಜಮೀನಿಗೆ ಹೋಗಿದ್ದಾಗ ಪೈರು ಸುಟ್ಟು ಹೋಗಿರುವುದು ಕಂಡು ಬಂದಿತ್ತು. ಗದ್ದೆ ಕಾಯುವ ದಿನೇಶ್ ಎಂಬಾತನನ್ನು ವಿಚಾರಿಸಿದಾಗ ಅ.9ರ ರಾತ್ರಿ ಬ್ಯಾಟರಿ ಹಿಡಿದು ಯಾರೋ ಗದ್ದೆಯಲ್ಲಿ ಓಡಾಡುತ್ತಿದ್ದರು. ಅವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

NAGARA-NEWS-GRAPHICS-BY-SHIVAMOGGA-LIVE

ವಿಷಯ ತಿಳಿದು ಗದ್ದೆಗೆ ಶಾಸಕ ಆರಗ‌ ಜ್ಞಾನೇಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿಗೆ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.