ಭದ್ರಾವತಿ: ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾವತಿಯ ಹೊಟೇಲ್ಗಳ ಮೇಲೆ ದಾಳಿ ಮುಂದುವರೆಸಿದೆ. ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಸಮೀಪವಿರುವ ವಿವಿಧ ಹೋಟೆಲ್ಗಳಿಗೆ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್ ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ, ಅಲ್ಲಿರುವ ಆಹಾರ ತಿನಿಸುಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿತು. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಹಲವು ಹೊಟೇಲ್ಗಳಲ್ಲಿ ಮಾರಲು ಇಟ್ಟಿದ್ದ ಆಹಾರ ತಿನಿಸುಗಳ ಪ್ಯಾಕೆಟ್ಗಳ ಮೇಲೆ ದರ ಮತ್ತು ಅವಧಿಯನ್ನು ನಮೂದಿಸದಿರುವುದು ಕಂಡುಬಂದಿತು. ಪೂರಿ, ಉದ್ದಿನ ವಡೆ, ಮೆಣಸಿನಕಾಯಿ ಬೋಂಡಾ, ಚಕ್ಕುಲಿ ಮೊದಲಾದ ತಿನಿಸು ಹಾಗೂ ಹೆಚ್ಚಿದ ತರಕಾರಿಗಳನ್ನು ತೆರೆದ ಸ್ಥಳದಲ್ಲಿ ಇರಿಸಲಾಗಿತ್ತು. ಮಾಂಸಾಹಾರಿ ಹೋಟೆಲ್ಗಳಲ್ಲಿ ಕೃತಕ ರಾಸಾಯನಿಕ ಬಣ್ಣ ಬಳಕೆ ಕಂಡುಬಂಡ ಕಾರಣ, ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.

ಹೋಟೆಲ್ಗಳಲ್ಲಿ ಪಾತ್ರೆ ತೊಳೆಯುವ ಸ್ಥಳ ಹಾಗೂ ಅಡುಗೆ ಬೇಯಿಸುವ ಒಲೆ ಇರುವ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಾಲೀಕರಿಗೆ ತಾಕೀತು ಮಾಡಲಾಯಿತು. ಹೋಟೆಲ್ ಪಕ್ಕವಿರುವ ಬೀಡಾ ಅಂಗಡಿಯಲ್ಲಿ ಬೀಡಾ ತಯಾರಿಕೆಗೆ ಬಳಸುವ ಪದಾರ್ಥಗಳ ಗುಣಮಟ್ಟದ ಪರಿಶೀಲನೆಯೂ ನಡೆಯಿತು.
ಸಮೀಪದ ಬೇಕರಿಗಳಿಗೆ ಭೇಟಿ ನೀಡಿದ ತಂಡ, ಅಲ್ಲಿ ಕೆಲವು ಅವಧಿ ಮೀರಿದ ಹಾಗೂ ಬಳಕೆಗೆ ಯೋಗ್ಯವಲ್ಲದ ವಸ್ತುಗಳು ಇರುವುದನ್ನು ಪತ್ತೆ ಹಚ್ಚಿ, ಅವುಗಳ ಮಾದರಿಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿತು.
ತಹಶೀಲ್ದಾರ್ ಪ್ರದೀಪ್ ದೇವಗಿರಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳಾದ ಮನೋಜ್ ಬಿ.ಎಂ., ಉಮೇಶ್ ಉಪಸ್ಥಿತರಿದ್ದರು.