ವಿಮಾ ಕಂಪನಿಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ, ಕಾರಣವೇನು?

ಶಿವಮೊಗ್ಗ: ನಿಯಮಾನುಸಾರ ಕಂತು ಪಾವತಿಸಿದರೂ ಜೀವ ವಿಮಾ ಪಾಲಿಸಿಯನ್ನು ಮರು ಆರಂಭಿಸದೆ ಸೇವಾನ್ಯೂನತೆ ಎಸಗಿದ ಮುಂಬೈನ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದ ಓಲ್ಡ್‌ಬಾರ್‌ಲೈನ್ ರಸ್ತೆ ನಿವಾಸಿ ನಾಗರಾಜ ಎಂಬುವರು ಜೀವ ವಿಮಾ ಪಾಲಿಸಿಯನ್ನು ವಾರ್ಷಿಕ ಕಂತು ₹65,460 ದಂತೆ 2019ರ ಜೂ. 30ರಿಂದ 2026ರ ಜೂ. 30ರವರೆಗೆ ಪಡೆದುಕೊಂಡಿದ್ದರು. 2024ರ ಕಂತು ಪಾವತಿ ಆಗದಿರುವುದನ್ನು ಗಮನಿಸಿ ದಂಡ ಸಹಿತ ₹82,467 ಹಣವನ್ನು 2025ರ ಮೇ 7ರಂದು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ತದನಂತರ 2025ರ ಜು.9ರಂದು ₹78,688 ಕಂತು ಪಾವತಿಸಿ, ಪಾಲಿಸಿಯನ್ನು ಮರು ಆರಂಭಿಸಲು (ರಿವೈವಲ್) ಕೋರಿದ್ದರು. ಕಂಪನಿ ಸೂಚನೆಯಂತೆ ಅಧಿಕೃತ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ವರದಿ ನೀಡಿದರೂ, ವಿಮಾ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡದೆ ಪಾಲಿಸಿ ಆರಂಭಿಸಿರಲಿಲ್ಲ.

Shimoga-Consumer-Court.

ನೋಟಿಸ್‌ ನೀಡಿದರೂ ಸ್ಪಂದಿಸದ ಕಾರಣ ದೂರುದಾರರು ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠ ವಿಮಾ ಕಂಪನಿಯು ಸೇವಾನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ.

ವಿಮಾ ಕಂಪನಿಯು ನಾಗರಾಜ ಅವರಿಗೆ ಬರಬೇಕಾದ ವಿಮಾ ಕಂತಿನ ಮೊತ್ತವನ್ನು ಪಡೆದು 45 ದಿನದೊಳಗೆ ಪಾಲಿಸಿ ಮರು ಆರಂಭಿಸಬೇಕು. ತಪ್ಪಿದಲ್ಲಿ ಪಾಲಿಸಿ ಮರು ಆರಂಭಿಸುವವರೆಗೆ ಪ್ರತಿದಿನ ₹100 ಪರಿಹಾರವನ್ನು ದೂರುದಾರರಿಗೆ ಪಾವತಿಸಬೇಕು. ಮಾನಸಿಕ ಹಿಂಸೆಗೆ ₹30,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ₹10,000 ಅನ್ನು 45 ದಿನದೊಳಗೆ ದೂರುದಾರರಿಗೆ ಪಾವತಿಸಬೇಕು. 45 ದಿನಗಳೊಳಗೆ ಮೊತ್ತ ಪಾವತಿಸದಿದ್ದರೆ ಶೇ.10ರಷ್ಟು ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ.