ಶಿವಮೊಗ್ಗ: ಅಂತರ್ಜಲ ಮಟ್ಟ ಎಲ್ಲೆಡೆ ಕುಸಿಯುತ್ತಿದ್ದು, ಮೇಲ್ಮೈ ನೀರಿನಿಂದ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಏಕ ಗ್ರಾಮ ಕುಡಿಯುವ ನೀರು ಯೋಜನೆಗೆ 67 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 100 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದ ಅಂಬೇಡ್ಕರ್ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಏಕಗ್ರಾಮ ಕುಡಿಯುವ ನೀರು ಯೋಜನೆಯು ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಶೇ.40ರಷ್ಟು ಕಾಮಗಾರಿ ಇನ್ನೂ ಆಗಬೇಕಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಮುಗಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸೂಚಿಸಿದರು.

ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ನೀರು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಬೋರ್ ವೆಲ್ ಬಾಡಿಗೆಗೆ ಪಡೆದು ಅಥವಾ ಪರ್ಯಾಯ ಜಲ ಮೂಲದಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದರು.
ನೀರು ಪೂರೈಕೆ ಮಾಡುವ ಟ್ಯಾಂಕರ್ ಮಾಲೀಕರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಬೇಕು. ತಿಂಗಳುಗಟ್ಟಲೆ ಅವರಿಗೆ ಹಣ ಪಾವತಿಸದಿದ್ದರೆ ಅವರು ಟ್ಯಾಂಕರ್ ನೀಡುವುದಿಲ್ಲ. ಇದರಿಂದ ಜನರಿಗೆ ಅನಗತ್ಯ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಗ್ರಾಮೀಣ ನೀರು ಪೂರೈಕೆಗೆ ಹಣವಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಹಣ ಬಳಕೆ ಆಗಿರುವುದು ಕಂಡುಬಂದಿರುವುದಿಲ್ಲ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸುವಂತೆ ಸೂಚಿಸಿದ ಸಚಿವರು, ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಈಗಿನಿಂದಲೇ ಕ್ರಮ ವಹಿಸುವಂತೆಯೂ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಅರಣ್ಯ ಸಮಸ್ಯೆ ಪರಿಹರಿಸಲು ಕ್ರಮ
ಕೆಲವು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಏಕಗ್ರಾಮ ಕುಡಿಯುವ ನೀರು ಯೋಜನೆ ಅಡಿ ಕೊಳವೆಗಳನ್ನು ಅಳವಡಿಸಲು ಅರಣ್ಯ ಪ್ರದೇಶ ಇರುವ ಕಾರಣ ವಿಳಂಬವಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು. ಈ ಸಂಬಂಧ ಅರಣ್ಯ ಸಚಿವರು ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ಸಮಸ್ಯೆ ಪರಿಹರಿಸುವುದಾಗಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರುಗಳಾದ ಬಿ.ಕೆ.ಸಂಗಮೇಶ್ವರ, ಶಾರದಾ ಪೂರ್ಯಾನಾಯಕ್, ಬಿಲ್ಕೀಸ್ ಬಾನು, ಆಯುಕ್ತರಾದ ವೈ.ಎಸ್. ಪಾಟೀಲ್, ಶಿವಮೊಗ್ಗ ಜಿ.ಪಂ. ಸಿಇ.ಓ ರಿಷಿ ಆನಂದ್, ವಿಬಿಜಿ ರಾಮ್ ಜಿ ನಿರ್ದೇಶಕ ದಿಡ್ಡಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.