ಶಿವಮೊಗ್ಗ: ದಿಢೀರ್ ಅಡ್ಡಬಂದ ನಾಯಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಸವಾರನ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಅಪಘಾತವಾಗಿದೆ. ಘಟನೆಯಲ್ಲಿ ಯುವತಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಮತ್ತೂರು ರಸ್ತೆಯ ಮಳಲಿಕೊಪ್ಪ ಚಾನೆಲ್ ಕ್ರಾಸ್ ತಿರುವಿನ ಬಳಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಘಟನೆಯಲ್ಲಿ ಕಡೇಕಲ್ ಗ್ರಾಮದ ಯೂಸ್ರಾತಾಜ್ ಖಾನಂ (18) ತಲೆ ಹಾಗೂ ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮೊಹಮ್ಮದ್ ಜಕಾವುಲ್ಲಾ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಕ್ಟೋಬರ್ 17ರ ರಾತ್ರಿ 9:30 ಮೊಹಮ್ಮದ್ ಜಕಾವುಲ್ಲಾ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಯೂಸ್ರಾತಾಜ್ ಹಾಗೂ ಮಕ್ಕಳಾದ ಆಫಿಯಾ ಅಮಿನಾ (10) ಮತ್ತು ಮಹೇರಾ (10) ಅವರನ್ನು ಕೂರಿಸಿಕೊಂಡು ಸೂಳೆಬೈಲ್ನಿಂದ ಕಡೇಕಲ್ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಮಳಲಿಕೊಪ್ಪ ಚಾನೆಲ್ ಕ್ರಾಸ್ ಬಳಿ ಏಕಾಏಕಿ ನಾಯಿ ರಸ್ತೆಗೆ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸವಾರ ಯತ್ನಿಸಿದಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಸ್ಕಿಡ್ ಆಗಿ ಬಿದ್ದಿದೆ. ಬೈಕಿನಲ್ಲಿದ್ದವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತಡವಾಗಿ ಪ್ರಕರಣ ದಾಖಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.