ಭದ್ರಾವತಿಯಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ 98 ಎಕರೆ ಜಮೀನು ಸರ್ವೆ, ಗಡಿ ಗುರುತು

ಭದ್ರಾವತಿ: ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ತಾಲ್ಲೂಕಿನ ಕೂಡ್ಲಿಗೆರೆ ಹೋಬಳಿಯ ಕಾಚಗೊಂಡನಹಳ್ಳಿ ಬಳಿ ಪರಿಶಿಷ್ಟ ಜಾತಿಯವರಿಗೆ ಮಂಜೂರಾಗಿದ್ದ 98 ಎಕರೆ ಜಮೀನಿನ ಸರ್ವೆ ನಡೆಸಿ ಗಡಿ ಗುರುತುಮಾಡಿತು. (ಈ ಸುದ್ದಿಯನ್ನು ಇನ್ನು 52 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

‘ಸರ್ಕಾರವು 1955-56ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೂರಹಿತ 49 ವ್ಯಕ್ತಿಗಳಿಗೆ ಗ್ರಾಮದ ಬಳಿ ತಲಾ 2 ಎಕರೆಯಂತೆ ಒಟ್ಟು 98 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಈ ಜಮೀನನ್ನು ಪರಿಶಿಷ್ಟರಲ್ಲದವರು ಅನುಭೋಗಿಸಿಕೊಂಡು ಬಂದಿದ್ದರು. ಇದನ್ನು ಮೂಲ ಫಲಾನುಭವಿಗಳಿಗೆ ದೊರಕಿಸಿಕೊಡುವಂತೆ ದಲಿತ ಸಂಘರ್ಷ ಸಮಿತಿ ಹಾಗೂ ಇತರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯ ಮಾಡಿದ್ದವು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಎಂ. ಏಳುಕೋಟಿ ತಿಳಿಸಿದರು. 

Bhadravathi-Kachagondanahalli-98-acres-Survey

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಉಪವಿಭಾಗಾಧಿಕಾರಿ ಎಚ್‌ಪಿಎಸ್ ಮೈತ್ರಿ ಅವರು ಸ್ಥಳದ ಮರು ಸರ್ವೆ ನಡೆಸಿ ಗಡಿ ಗುರುತಿಸುವಂತೆ ಭದ್ರಾವತಿ ತಹಶೀಲ್ದಾರ್‌ಗೆ ಸೂಚಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಮೂಲ ಮಂಜೂರಾತಿದಾರರ ಕುಟುಂಬದವರು ಹಾಗೂ ಹಾಲಿ ಸ್ವಾಧೀನದಲ್ಲಿದ್ದ ಜಮೀನಿನವರು ಸ್ಥಳದಲ್ಲಿ ಜಮಾಯಿಸಿದ್ದರು. ಎರಡೂ ಕಡೆಯವರು ಅಧಿಕಾರಿಗಳ ಬಳಿ ತಮ್ಮ ಅಹವಾಲುಗಳನ್ನು ಹೇಳಿಕೊಂಡರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ನಂತರ ಪೊಲೀಸ್ ಭದ್ರತೆಯಲ್ಲಿ ಜಾಗದ ಅಳತೆ ಮಾಡಿ ಗಡಿಗಳನ್ನು ಗುರುತಿಸಲಾಯಿತು. ಸರ್ವೆ ಕುರಿತು ತಹಶೀಲ್ದಾರ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ದಲಿತ ಮುಖಂಡರಾದ ಶಿವಬಸಪ್ಪ, ಆರ್. ತಮ್ಮಯ್ಯ, ಕುಬೇಂದ್ರಪ್ಪ, ಸುಪ್ರೀತ.ಬಿ.ಟಿ. ಉಪಸ್ಥಿತರಿದ್ದರು.