ಶಿವಮೊಗ್ಗ: ಪೊಲೀಸರನ್ನು ಕಂಡು ತಪ್ಪಿಸಿಕೊಂಡು ಸಾಗುತ್ತಿದ್ದ ಗೂಡ್ಸ್ ವಾಹನವೊಂದನ್ನು ಬೆನ್ನಟ್ಟಿ ತಡೆದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಈ ಸುದ್ದಿಯನ್ನು ಇನ್ನು 46 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಅ.26ರ ಬೆಳಗಿನ ಜಾವ ಜಯನಗರ ಹಾಗೂ ವಿನೋಬನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೊನ್ನಾಳಿ ರಸ್ತೆ ಕಡೆಯಿಂದ ಬಂದ ಗೂಡ್ಸ್ ವಾಹನವೊಂದಕ್ಕೆ ನಿಲ್ಲಿಸುವಂತೆ ಸೂಚಿಸಿದರೂ, ಚಾಲಕ ವಾಹನ ನಿಲ್ಲಿಸದೇ ಶಂಕರಮಠ ರಸ್ತೆಯ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅನುಮಾನಗೊಂಡ ಜಯನಗರ ಪಿಎಸ್‌ಐ ಕೋಮಲಾ ಬಿ.ಆರ್. ಹಾಗೂ ಸಿಬ್ಬಂದಿ ಬೈಕ್‌ಗಳಲ್ಲಿ ವಾಹನ ಹಿಂಬಾಲಿಸಿದ್ದರು.

ನಗರದ ಸೈನ್ಸ್ ಮೈದಾನದ ಮುಂಭಾಗ ವಾಹನವನ್ನು ತಡೆದು ಪರಿಶೀಲಿಸಿದರು. ವಾಹನದ ಹಿಂಭಾಗ ಟರ್ಪಾಲಿನ್ ಮುಚ್ಚಲಾಗಿದ್ದು, ಅದನ್ನು ತೆಗೆದು ನೋಡಿದಾಗ 9 ಜಾನುವಾರುಗಳನ್ನು ಕಟ್ಟಿ ಹಾಕಿರುವುದು ಕಂಡುಬಂದಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ರಾಣೇಬೆನ್ನೂರಿನಿಂದ ಶಿವಮೊಗ್ಗದ ಸವಾಯಿ ಪಾಳ್ಯಕ್ಕೆ ದನಗಳನ್ನು ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧ ಜಾನುವಾರುಗಳು ಹಾಗೂ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.