ಸಾಗರ: ತಾಲ್ಲೂಕಿನ ಗೌತಮಪುರ, ಸಂಪಳ್ಳಿ, ಸಾಡಗಳಲೆ, ಕೋಟೆಕೊಪ್ಪ, ವಸಂತೆ, ಕುಡಿಗೆರೆ, ತ್ಯಾಗರ್ತಿ ಭಾಗದಲ್ಲಿ ಗುರುವಾರ ಕಾಡಾನೆ ಹಿಂಡು ಗದ್ದೆ–ತೋಟಗಳಲ್ಲಿ ಓಡಾಡಿದೆ. ಆನೆಗಳು ಓಡಾಡಿದ ಹಾದಿಯಲ್ಲಿ ಗದ್ದೆಗಳಲ್ಲಿನ ಭತ್ತದ ಬೆಳೆ, ತೋಟಗಳಲ್ಲಿನ ಅಡಿಕೆ, ಬಾಳೆ ಗಿಡಗಳು ಹಾನಿಗೀಡಾಗಿವೆ. ಜೊತೆಗೆ ನಾಲ್ಕು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. (ಈ ಸುದ್ದಿಯನ್ನು ಇನ್ನು 72 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಾಲ್ಕು ಗಂಡಾನೆ, ಒಂದು ಹೆಣ್ಣು ಸೇರಿ ಐದು ಆನೆಗಳು ಗುಂಪಾಗಿ ಓಡಾಡುತ್ತಿವೆ. ಅವುಗಳನ್ನು ಹಿಂಬಾಲಿಸುವ ಸ್ಥಳೀಯರು ಗರ್ನಾಲ್ ಸಿಡಿಸಿ, ಕೇಕೆ ಹಾಕಿ ಕಾಡಿನತ್ತ ಓಡಿಸಲು ಮುಂದಾಗಿದ್ದಾರೆ. ಬೆದರಿದ ಆನೆಗಳು ಸಂಜೆ ವೇಳೆಗೆ ಚೆನ್ನಾಪುರ, ನಾಡವಳ್ಳಿ, ಬೆಳಂದೂರು ಭಾಗದತ್ತ ತೆರಳಿವೆ.

20 ದಿನಗಳಿಂದ ಹೆಚ್ಚಿದ ಹಾವಳಿ
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಭಾಗದಿಂದ ಬಂದಿರುವ ಈ ಆನೆಗಳ ಹಿಂಡು 20 ದಿನಗಳಿಂದ ಶಿವಮೊಗ್ಗ, ಹೊಸನಗರ ತಾಲ್ಲೂಕಿನಲ್ಲಿ ಹಾವಳಿ ಮಾಡಿದ್ದವು. ಶಿವಮೊಗ್ಗ ತಾಲ್ಲೂಕಿನ ಸಿರೆಗೆರೆಯಲ್ಲಿ ಅಡಿಕೆ ತೋಟಕ್ಕೆ ನುಗ್ಗಿದ ಪರಿಣಾಮ 100ಕ್ಕೂ ಹೆಚ್ಚು ಗಿಡಗಳು ಹಾನಿಗೀಡಾಗಿದ್ದವು. ನಂತರ ಹೊಸನಗರ ತಾಲ್ಲೂಕಿನ ಚಿಲುಮೆ ಜೆಡ್ಡು ಗ್ರಾಮದಲ್ಲಿ ಕಟ್ಟೆ ಪುಟ್ಟಪ್ಪನವರ ಗದ್ದೆ ಹಾಗೂ ಕಟ್ಟೆರ್ ಮನೆ ಹಾಗೂ ಸಂಪಿಗೆ ಹಳ್ಳದಲ್ಲಿ ಭತ್ತದ ಗದ್ದೆಗಳನ್ನು ಹಾಳು ಮಾಡಿದ್ದವು.
ಈಗ ಅದೇ ಆನೆಗಳ ಹಿಂಡು ಸಾಗರ ತಾಲ್ಲೂಕಿನ ಹಳ್ಳಿಗಳಿಗೆ ದಾಂಗುಡಿ ಇಟ್ಟಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆ ಕಾರ್ಯಾಚರಣೆ
ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಚರಣೆ ನಡೆಸಿದರು. ಆನೆಗಳನ್ನು ಚೋರಡಿ ವಲಯದ ಕಣ್ಣೂರು ಕಾಡಿಗೆ ಓಡಿಸುವ ಕಾರ್ಯ ಮಾಡಿದರು. ಕೊರಗಿ – ಅರಸಾಳು ಮಾರ್ಗವಾಗಿ ಸಿರಿಗೆರೆ ವನ್ಯಜೀವಿ ವಲಯಕ್ಕೆ ಆನೆಗಳನ್ನು ಕಳುಹಿಸುವ ಕಾರ್ಯ ನಡೆಯುತ್ತಿದೆ.
ಎಸಿಎಫ್ ರವೀಂದ್ರ ನಾಯ್ಕ್, ಆರ್ಎಫ್ಒ ಮಾಧವ್ ದೊಡ್ಡಬುಡುಗಿ ಮತ್ತು ಮೋಹನ್ ನೇತೃತ್ವದಲ್ಲಿ, ಡಿಆರ್ಎಫ್ಒ ಅಬ್ದುಲ್ ಕರೀಂ, ಮಂಜಪ್ಪ, ಚಂದ್ರಶೇಖರ್, ಸುರೇಂದ್ರ, ಅರುಣ್, ಬೀಟ್ ಸಿಬ್ಬಂದಿ ಸುರೇಶ, ಚಂದ್ರಪ್ಪ, ವಿಜಯ್ ಸೇರಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿದೆ ಆನೆಗಳ ವಿಡಿಯೋ.