ಶಿವಮೊಗ್ಗ: ಮನೆಯ ಹೆಂಚು ಕಿತ್ತು ಒಳನುಗ್ಗಿದ ಕಳ್ಳರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿದ್ದಾರೆ. ಸಂತೆಕಡೂರು ಗ್ರಾಮದ ಮಾರಿಗಡಿಗೆ ಬಳಿ ಮಂಜುನಾಥ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಮಂಜುನಾಥ್ ಅವರು ಪತ್ನಿ ಮತ್ತು ಮಕ್ಕಳ ಜೊತೆಗೆ ಚನ್ನಗಿರಿ ತಾಲೂಕಿನಲ್ಲಿರುವ ಅತ್ತೆ ಮನೆಗೆ ತೆರಳಿದ್ದರು. ಎರಡು ದಿನದ ಬಳಿಕ ಮಂಜುನಾಥ್ ಅವರ ಮನೆಯ ಹಿಂಬಾಗಿಲು ತೆರೆದಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮನೆಗೆ ಆಗಮಿಸಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಅಡುಗೆ ಮನೆಯ ಮೇಲ್ಚಾವಣಿಯ ಹೆಂಚುಗಳನ್ನು ತೆಗೆದು ಒಳನುಗ್ಗಿರುವ ಕಳ್ಳರು, ಡೈನಿಂಗ್ ಹಾಲ್‌ನಲ್ಲಿದ್ದ ಬೀರುವಿನ ಲಾಕರ್ ಮುರಿದಿದ್ದಾರೆ. ಬೀರುವಿನಲ್ಲಿದ್ದ ₹3.80 ಲಕ್ಷ ಮೌಲ್ಯದ 38 ಗ್ರಾಂ ತೂಕದ ಬಂಗಾರದ ಆಭರಣಗಳು, ₹30,000 ಮೌಲ್ಯದ 200 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ₹2.15 ಲಕ್ಷ ನಗದು ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.