ಬ್ಯೂಟಿ ಪಾರ್ಲರ್‌ನಲ್ಲಿ ಫೇಶಿಯಲ್‌ ಮಾಡಿಸಿಕೊಂಡು ಹೊರಟಾಗ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ಬ್ಯೂಟಿ ಪಾರ್ಲರ್‌ಗೆ ಬಂದಿದ್ದ ಗ್ರಾಹಕರೊಬ್ಬರ ₹9.21 ಲಕ್ಷ ಮೌಲ್ಯದ 67 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ಬ್ಯೂಟಿ ಪಾರ್ಲರ್‌ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 52 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಚಿಕ್ಕಮಗಳೂರು ಜಿಲ್ಲೆಯ ಅಕ್ಷತಾ ಎಂಬುವವರು ಅಕ್ಟೋಬರ್ 19 ರಂದು ಪತಿಯೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದರು. ನಗರದ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಫೇಶಿಯಲ್ ಮಾಡಿಸಿಕೊಳ್ಳಲು ತೆರಳಿದ್ದರು.

Shimoga-Police-Jeep

ಫೇಶಿಯಲ್ ಮಾಡುವ ಮುನ್ನ ತಾವು ಧರಿಸಿದ್ದ ಆಭರಣಗಳನ್ನು ತೆಗೆದು ಹೊರಗಡೆ ಕುಳಿತಿದ್ದ ಪತಿಗೆ ನೀಡಲು ಅಕ್ಷತಾ ಮುಂದಾಗಿದ್ದರು. ಆದರೆ ಪಾರ್ಲರ್‌ನ ಸಿಬ್ಬಂದಿ ತಮ್ಮಲ್ಲಿಯೇ ಲಾಕರ್ ಇರುವುದಾಗಿ ತಿಳಿಸಿದ್ದರು. ಒಡವೆಗಳನ್ನು ಬಾಕ್ಸ್‌ನಲ್ಲಿ ಇರಿಸಿ ಲಾಕರ್‌ನ ಬೀಗ ನೀಡಿದ್ದರು. ಫೇಶಿಯಲ್ ಮುಗಿದ ನಂತರ ಆಭರಣ ತೆಗೆದುಕೊಳ್ಳಲು ತೆರಳಿದಾಗ, ಲಾಕರ್ ಓಪನ್‌ ಆಗಿತ್ತು. ಒಳಗಿದ್ದ ಆಭರಣ ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

43 ಗ್ರಾಂ ತೂಕದ ಮಾಂಗಲ್ಯ ಸರ, 4.5 ಗ್ರಾಂ ತೂಕದ ಡೈಮಂಡ್ ರಿಂಗ್, ಬಂಗಾರದ ಉಂಗುರಗಳು ಹಾಗೂ ಓಲೆ ಸೇರಿದಂತೆ ಒಟ್ಟು ₹9.21 ಲಕ್ಷ ಮೌಲ್ಯದ 67 ಗ್ರಾಂ ಆಭರಣಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ವಿಚಾರಿಸಿ ಕಳುವಾದ ಆಭರಣಗಳನ್ನು ವಾಪಸ್ ಕೊಡುವುದಾಗಿ ಪಾರ್ಲರ್‌ನವರು‌ ತಿಳಿಸಿದ್ದರು. ಆದರೆ ಕಾಲಹರಣ ಮಾಡಿದ್ದರಿಂದ ತಡವಾಗಿ ದೂರು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.