ಕರ್ನಾಟಕ ಕ್ರಿಕೆಟ್‌ ತಂಡಕ್ಕೆ ಶಿವಮೊಗ್ಗದ ಆಯುಷ್‌ ಆಯ್ಕೆ, ಯಾವಾಗ ನಡೆಯಲಿದೆ ಪಂದ್ಯ?

ಶಿವಮೊಗ್ಗ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ 16 ವರ್ಷದೊಳಗಿನವರ ಪ್ರತಿಷ್ಠಿತ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಶಿವಮೊಗ್ಗದ ಯುವ ಕ್ರಿಕೆಟಿಗ ಆಯುಷ್ ವೈ.ಎಸ್. ಆಯ್ಕೆಯಾಗಿದ್ದಾರೆ. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ ಆಟಗಾರರ ಪಟ್ಟಿಯಲ್ಲಿ ಶಿವಮೊಗ್ಗ ವಲಯದಿಂದ ಆಯ್ಕೆಯಾಗಿರುವ ಆಯುಷ್ ಸ್ಥಾನ ಪಡೆದಿದ್ದಾರೆ. ಉತ್ತರ ಪ್ರದೇಶದ ಲಖನೌನಲ್ಲಿ ನ. 14ರಿಂದ ಡಿ. 8ರವರೆಗೆ ಪಂದ್ಯಾವಳಿ ನಡೆಯಲಿದೆ. ಸದ್ಯ ಶಿವಮೊಗ್ಗದ ಡೈಮಂಡ್ ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ನಗರದ ವಿಕಾಸ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

Shivamogga-young-cricketer-Ayush-Y.S.-selected-for-Karnataka-Team

ಈ ಹಿಂದೆ ಬಿಸಿಸಿಐ ಪುದುಚೇರಿಯಲ್ಲಿ ಆಯೋಜಿಸಿದ್ದ 14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್ ಪಂದ್ಯಾವಳಿಗೂ ಆಯುಷ್ ಆಯ್ಕೆಯಾಗಿ ಆಡಿದ್ದರು. ಇದೀಗ ದೇಶದ ಪ್ರತಿಷ್ಠಿತ ವಯೋಮಿತಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ವಿಜಯ್ ಮರ್ಚೆಂಟ್ ಟ್ರೋಫಿಗೂ ಆಯ್ಕೆಯಾಗಿದ್ದಾರೆ. ಆಯುಷ್‌ ಅವರು ಪತ್ರಕರ್ತ ವೈ.ಕೆ. ಸೂರ್ಯನಾರಾಯಣ ಹಾಗೂ ಶಿಕ್ಷಕಿ ವತ್ಸಲಾ ದಂಪತಿಯ ಪುತ್ರ.