ಶಿವಮೊಗ್ಗ: ದುಬೈನಿಂದ ಕಡಿಮೆ ದರಕ್ಕೆ ಮೊಬೈಲ್ ಹಾಗೂ ಆಕ್ಸೆಸರೀಸ್ಗಳನ್ನು ಪೂರೈಸುವುದಾಗಿ ಮತ್ತು ಡೀಲರ್ಶಿಪ್ ನೀಡುವುದಾಗಿ ನಂಬಿಸಿ ಶಿವಮೊಗ್ಗದ ವ್ಯಾಪಾರಿಯೊಬ್ಬರಿಗೆ ₹2.79 ಲಕ್ಷ ವಂಚಿಸಲಾಗಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇನ್ಸ್ಟಾಗ್ರಾಮ್ನಲ್ಲಿ ಕೀಪ್ಯಾಡ್ ಹಾಗೂ ಸ್ಮಾರ್ಟ್ಫೋನ್ಗಳ ಮಾರಾಟಕ್ಕಾಗಿ ಡೀಲರ್ಶಿಪ್ ನೀಡುವ ಜಾಹೀರಾತು ನೋಡಿ ಶಿವಮೊಗ್ಗದ ವ್ಯಾಪಾರಿ ಪ್ರತಿಕ್ರಿಯಿಸಿದ್ದರು. ಇದಾದ ಬಳಿಕ ವ್ಯಕ್ತಿಯೊಬ್ಬ ದುಬೈನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಬೆಂಗಳೂರು ಹಾಗೂ ಮುಂಬೈಗಿಂತ ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಫೋನ್ಗಳನ್ನು ಪೂರೈಸುವುದಾಗಿ ನಂಬಿಸಿದ್ದನು. ಜೂನ್ 4 ರಂದು ಫೋನ್ ಪೇ ಮೂಲಕ ₹25,000 ಮುಂಗಡ ಹಣ ಪಡೆದಿದ್ದ ಆ ವ್ಯಕ್ತಿ, ಬಳಿಕ ವಿವಿಧ ಶುಲ್ಕಗಳ ನೆಪದಲ್ಲಿ ಅಕ್ಟೋಬರ್ 9 ರವರೆಗೆ ಹಂತ ಹಂತವಾಗಿ ಒಟ್ಟು ₹2,79,000 ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಹಣ ಪಡೆದ ನಂತರ ಮೊಬೈಲ್ ಹಾಗೂ ಸಾಮಗ್ರಿಗಳನ್ನು ಕಳುಹಿಸಿರಲಿಲ್ಲ. ಕರೆ ಮಾಡಿದಾಗ ಆ ವ್ಯಕ್ತಿಯಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಮೋಸ ಹೋಗಿರುವುದು ಶಿವಮೊಗ್ಗದ ವ್ಯಾಪಾರಿಯ ಅರಿವಿಗೆ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.