ಶಿವಮೊಗ್ಗ: ರಾಜ್ಯ ಸರ್ಕಾರ ತಕ್ಷಣವೇ ಕಬ್ಬಿಗೆ ರಾಜ್ಯ ಸಲಹಾ ದರ (ಎಸ್ಎಪಿ) ನಿಗದಿಪಡಿಸಬೇಕು, ಪ್ರತಿ ಟನ್ ಕಬ್ಬಿಗೆ ₹5,500 ದರ ಘೋಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. (ಈ ಸುದ್ದಿಯನ್ನು ಇನ್ನು 73 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಕಬ್ಬು ಬೆಳೆಗಾರರು ಚಳುವಳಿ ನಡೆಸುತ್ತಿದ್ದಾರೆ. ಬೆಲೆ ನಿಗದಿ ವಿಚಾರವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಸಮಿತಿಯ ನಡುವೆ ನಡೆದ ಚರ್ಚೆ ವಿಫಲವಾಗಿದೆ. ಬರಗಾಲದ ಹಿನ್ನೆಲೆ ಕಬ್ಬು ಬೆಳೆ ಒಣಗುತ್ತಿದೆ. ತಕ್ಷಣವೇ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸಬೇಕು ಎಂದು ರೈತರು ಆಗ್ರಹಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ನಿಗದಿಯಲ್ಲಿ ಪರಸ್ಪರ ಆರೋಪಿಸುವುದನ್ನು ಬಿಟ್ಟು ತಕ್ಷಣ ಸೂಕ್ತ ಬೆಲೆ ಘೋಷಿಸಬೇಕು. ಸಕ್ಕರೆ ಇಳುವರಿ ಹಾಗೂ ತೂಕದಲ್ಲಿ ನಡೆಯುವ ವಂಚನೆ ತಡೆದು, ರೈತರಿಗೆ ಪಾವತಿಸಲು ಬಾಕಿ ಇರುವ ಹಣವನ್ನು ತಕ್ಷಣ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬರಗಾಲದ ಪರಿಹಾರವಾಗಿ ಪ್ರತಿ ಎಕರೆಗೆ ₹25,000 ತುರ್ತು ಆರ್ಥಿಕ ನೆರವು ಘೋಷಿಸಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ ಕಲ್ಪಿಸಬೇಕು. ರೈತರ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ನಿರಂತರ 10 ಗಂಟೆ ವಿದ್ಯುತ್ ಪೂರೈಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷವಿಡೀ ಕೆಲಸ ಒದಗಿಸಬೇಕು ಹಾಗೂ ಕೃಷಿ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಜಿಲ್ಲಾ ಅಧ್ಯಕ್ಷ ಕೆ. ರಾಘವೇಂದ್ರ, ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯಾ ರಾಘವೇಂದ್ರ, ರಾಜ್ಯಾ ಉಪಾಧ್ಯಕ್ಷರಾದ ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಹೆಚ್.ಎನ್. ಜ್ಞಾನೇಶ್, ಜಿ.ಎನ್. ಪಂಚಾಕ್ಷರಿ, ಸಿ. ಚಂದ್ರಪ್ಪ, ಎಂ. ಮಹಾದೇವಪ್ಪ, ಪಿ. ಶೇಖರಪ್ಪ ಸೇರಿ ಹಲವರು ಇದ್ದರು.