ಶಿವಮೊಗ್ಗ: ‘ಕ್ರಿಯಾಶೀಲ ತಾರೆಯರು ಶಿವಮೊಗ್ಗ’ ತಂಡದ ನಾಯಕತ್ವದಲ್ಲಿ ಹೊಸನಗರ ತಾಲೂಕಿನ ಕಲ್ಲುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ಗಳನ್ನು ವಿತರಿಸಲಾಯಿತು. (ಈ ಸುದ್ದಿಯನ್ನು ಇನ್ನು 55 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ತಂಡದ ಅಧ್ಯಕ್ಷೆ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಫೌಜಿಯ ಸರವತ್, ಸರ್ಕಾರಿ ಶಾಲಾ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಉಚಿತವಾಗಿ ನೀಡಲಾದ ನೋಟ್ಬುಕ್ಗಳನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಮಾರುತಿ ಮೆಡಿಕಲ್ಸ್ನ ಮಹೇಂದ್ರ ಮನೋತ್, ಉಪೇಂದ್ರ, ನಯಾಜ್ ಹಾಗೂ ದಾನಿ ಪುರುಷೋತ್ತಮ್ ಅವರ ಸಹಕಾರದೊಂದಿಗೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ಉಚಿತ ನೋಟ್ಬುಕ್ ವಿತರಿಸಲಾಗುತ್ತಿದೆ ಎಂದರು.

ಸಮಾಜ ಸೇವಕರ ತಂಡದ ವತಿಯಿಂದ ಈ ಶೈಕ್ಷಣಿಕ ವರ್ಷದಲ್ಲಿ ಆಯ್ದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ₹1.50 ಲಕ್ಷ ಮೌಲ್ಯದ 15 ಸಾವಿರ ನೋಟ್ ಪುಸ್ತಕ ವಿತರಣೆ ಮಾಡಲಾಗುತ್ತಿದೆ.
ಕಲ್ಲುಹಳ್ಳ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪ್ರಭಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಪುರುಷೋತ್ತಮ್, ಬೆಳ್ಳೂರು ಸಮೂಹ ಸಂಪನ್ಮೂಲ ವ್ಯಕ್ತಿ ಶೀಲಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಮೂರ್ತಿ, ಬಸವರಾಜಪ್ಪ, ಶಿವಪ್ಪ, ಮಾಲತೇಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳೂರು ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ವಿನುತ ಸ್ವಾಗತಿಸಿದರು, ಮಾಲತೇಶ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಪದ್ಮಾವತಿ ವಂದಿಸಿದರು.