ಆನಂದಪುರ: ತಿರುವಿನಲ್ಲಿ ರಸ್ತೆ ಕ್ರಾಸ್ ಮಾಡಲು ನಿಂತಿದ್ದಓಮ್ನಿ ಕಾರು ಹಾಗೂ ಸ್ಕೂಟಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 7 ವರ್ಷದ ಬಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿದೆ. ಆನಂದಪುರದ ಗೌರಿಕೆರೆ ಸರ್ಕಲ್ ಸಮೀಪ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಸಾಗರ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ವ್ಯಾಗ್ನರ್ ಕಾರು, ರಸ್ತೆ ದಾಟಲು ನಿಂತಿದ್ದ ಮಾರುತಿ ಓಮ್ನಿ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓಮ್ನಿ ವಾಹನವು ಮುಂದೆ ನಿಂತಿದ್ದ ಸ್ಕೂಟಿಗೆ ಗುದ್ದಿದೆ. ಆಗ ಸ್ಕೂಟಿ ನಿಯಂತ್ರಣ ತಪ್ಪಿ ಬಿದ್ದಿದ್ದು ಅದರಲ್ಲಿದ್ದ ಆನಂದಪುರ ಗ್ರಾಮದ ಪ್ರವೀಣ್ (35) ಹಾಗೂ ಪ್ರಥಮ್ (7) ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಬಾಲಕ ಪ್ರಥಮ್ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದು ಸೊಂಟ ಹಾಗೂ ಬಲ ಕಾಲಿಗೆ ಪೆಟ್ಟಾಗಿದೆ. ಪ್ರವೀಣ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ಎಸಗಿದ ವ್ಯಾಗ್ನರ್ ಕಾರಿನ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.