ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭ ಬೆಲೆ ಏರಿಸುವ ಮೂಲಕ ರಾಜ್ಯ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ. ಅಗತ್ಯ ವಸ್ತುಗಳಿಗೆ ಈಗಾಗಲೆ ಏರಿಸಿರುವ ಬೆಲೆಯನ್ನು ಇಳಿಸುವ ಬುದ್ಧಿಯನ್ನು ಗೋಮಾತೆ ಸರ್ಕಾರಕ್ಕೆ ನೀಡಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. (ಈ ಸುದ್ದಿಯನ್ನು ಇನ್ನು 45 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಭಾವನೆಯೊಂದಿಗೆ ರಾಜಕಾರಣ ಮಾಡುವುದಿಲ್ಲ, ಬದುಕಿನೊಂದಿಗೆ ರಾಜಕಾರಣ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸುವ ಸಂದರ್ಭ ಹೇಳಿದ್ದರು. ಆದರೆ, ಗೋಪೂಜೆಯಲ್ಲಿ ಭಾವನೆ ಮತ್ತು ಬದುಕು ಎರಡೂ ಅಡಕವಾಗಿವೆ. ಗೋವನ್ನು ತಾಯಿಯ ರೂಪದಲ್ಲಿ ಪೂಜಿಸುವುದು ನಮ್ಮ ಭಾವನೆಯಾದರೆ, ಬದುಕಿಗೂ ಗೋಮಾತೆಯೇ ಆಧಾರ. ಭಾವನೆ ಮತ್ತು ಬದುಕಿನ ನಡುವಿನ ಸಂಬಂಧವನ್ನು ಗೋಮಾತೆ ಕಲಿಸುತ್ತಾಳೆ ಎಂದರು.

ಜನರ ಅಪೇಕ್ಷೆಯಂತೆ ರಾಜ್ಯದಲ್ಲಿ ಹೆಚ್ಚಿನ ಗೋಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಬೇಕು. ಸರ್ಕಾರವೇ ಜಾಗ ನೀಡಿದರೂ ಅಲ್ಲಿ ನಿರ್ಮಿಸಿರುವ ಗೋಶಾಲೆಯನ್ನು ಅರಣ್ಯ ಇಲಾಖೆಯ ಜಾಗ ಎಂದು ಹೇಳಲಾಗುತ್ತಿದೆ. ಗೋಶಾಲೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.