ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾವೆಲ್ಲ ವಿಮಾನ ಬಂದವು? ಸೇವೆ ಸ್ಥಗಿತಕ್ಕೆ ಕಾರಣವೇನು?

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೂರನೆ ವಿಮಾನಯಾನ ಸಂಸ್ಥೆ ತನ್ನ ಸೇವೆ ನಿಲ್ಲಿಸಲು ಸಜ್ಜಾಗಿದೆ. ನವೆಂಬರ್‌ 21ರಂದು ಸ್ಟಾರ್‌ ಏರ್‌ ವಿಮಾನ ತನ್ನ ಕೊನೆಯ ಹಾರಾಟ ನಡೆಸಲಿದೆ. ಆನಂತರ ಮಲೆನಾಡಿನ ಹೈಟೆಕ್‌ ವಿಮಾನ ನಿಲ್ದಾಣ ಲೋಹದ ಹಕ್ಕಿಗಳಿಲ್ಲದೆ ಬಣಗುಡಲಿದೆ. ಶಿವಮೊಗ್ಗಕ್ಕೆ ಈತನಕ ಯಾವೆಲ್ಲ ಸಂಸ್ಥೆಯ ವಿಮಾನಗಳು ಬಂದವು? ಹಾರಾಟ ನಿಲ್ಲಿಸಿದ್ದು ಏಕೆ? ಇಲ್ಲಿದೆ ವಿವರ. (ಈ ಸುದ್ದಿಯನ್ನು ಇನ್ನು 122 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಯಾವ್ಯಾವ ವಿಮಾನ ಬಂತು? ಯಾಕೆ ನಿಂತಿತು?

ಸಂಸ್ಥೆ: ಇಂಡಿಗೋ

ಮಾರ್ಗ: ಬೆಂಗಳೂರು – ಶಿವಮೊಗ್ಗ – ಬೆಂಗಳೂರು

Indigo-and-Star-Air-in-shivamogga-Airport

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲು ಬಂದ ಕಮರ್ಷಿಯಲ್‌ ಏರ್‌ಲೈನ್ಸ್‌, ಇಂಡಿಗೋ ಸಂಸ್ಥೆಯ ಎಟಿಆರ್‌ 72 ಮಾದರಿಯ ವಿಮಾನ. 2023ರ ಆಗಸ್ಟ್‌ 31ರಂದು ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಮಲೆನಾಡಿಗರು ಪುಳಕಿತರಾದರು. ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಗಿತ್ತು. ಆದರೆ 2026ರ ಮೇ 1ರಿಂದ ಈ ಮಾರ್ಗದಲ್ಲಿ ಇಂಡಿಗೋ ಸಂಸ್ಥೆ ತನ್ನ ಸೇವೆ ನಿಲ್ಲಿಸಿತು. ಇದು ಈ ಭಾಗದ ಜನರಿಗೆ ಆಘಾತ ಉಂಟು ಮಾಡಿತ್ತು.

ಕಾರಣವೇನು?: ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನದ ದುರಂತದ ಬೆನ್ನಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು, ಹಾರಾಟ ಕರ್ತವ್ಯ ಸಮಯ ಮಿತಿ ನಿಯಮಗಳನ್ನು ಬಿಗಿಗೊಳಿಸಿತು. ಪ್ರತಿ ಪೈಲೆಟ್‌ 6 ಗಂಟೆ ಮಾತ್ರ ವಿಮಾನ ಹಾರಾಟ ಮಾಡಬೇಕು ಎಂದು ಸೂಚಿಸಿತು. ಹಾಗಾಗಿ, ಪೈಲೆಟ್‌ಗಳ ಕೊರತೆಯಿಂದಾಗಿ ಹಲವು ಡೊಮೆಸ್ಟಿಕ್‌ ಮಾರ್ಗಗಳಲ್ಲಿ ಇಂಡಿಗೋ ಸೇವೆ ಸ್ಥಗಿತವಾಯಿತು. ಇದರ ನಡುವೆ ಇಂಧನ ದರ ದುಬಾರಿಯಾಗಿದ್ದು ಹೊರೆಯಾಗಿತ್ತು.

ಇನ್ನು, ಬೆಂಗಳೂರು – ಶಿವಮೊಗ್ಗ ಮಾರ್ಗವು ಉಡಾನ್‌ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರವೆ ವಯೋಬಲಿಟಿ ಗ್ಯಾಪ್ ಫಂಡಿಂಗ್ (VGF) ಒಪ್ಪಂದದ ಮೂಲಕ ನೆರವು ನೀಡುತ್ತಿತ್ತು. ಪ್ರತಿ ಟಿಕೆಟ್‌ಗೆ ₹500 ಸಹಾಯಧನವನ್ನು ರಾಜ್ಯ ಸರ್ಕಾರ ಒದಗಿಸುತ್ತಿತ್ತು. ಈ ಒಪ್ಪಂದವು 2025ರ ಆಗಸ್ಟ್‌ನಲ್ಲಿ ಮುಕ್ತಾಯಗೊಂಡಿತ್ತು.

ಸಂಸ್ಥೆ: ಸ್ಪೈಸ್‌ ಜೆಟ್‌

ಮಾರ್ಗ: ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್‌

2024ರ ಅಕ್ಟೋಬರ್‌ 10 ರಿಂದ ಶಿವಮೊಗ್ಗಕ್ಕೆ ಸ್ಪೈಸ್‌ ಜೆಟ್‌ ವಿಮಾನಗಳು ಬರಲು ಆರಂಭವಾಗಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಗಿತ್ತು. 2026ರ ಜೂನ್‌ ತಿಂಗಳಲ್ಲಿ ಸ್ಪೈಸ್‌ ಜೆಟ್‌ ವಿಮಾನಯಾನ ಸೇವೆ ನಿಲ್ಲಿಸಿತು. ಒಂದು ತಿಂಗಳ ಅಂತರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಎರಡನೇ ವಿಮಾನಯಾನ ಸಂಸ್ಥೆ ತನ್ನ ಸೇವೆ ಸ್ಥಗಿತಗೊಳಿಸಿತ್ತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಕಾರಣವೇನು?: ಸ್ಪೈಸ್‌ ಜೆಟ್‌ ಸಂಸ್ಥೆಯ ಆಂತಕ ಸಮಸ್ಯೆಯಿಂದಾಗಿ ಹಲವು ಡೊಮೆಸ್ಟಿಕ್‌ ರೂಟ್‌ಗಳಲ್ಲಿ ವಿಮಾನಯಾನ ಸೇವೆ ಸ್ಥಗಿತಗೊಳಿಸಿತ್ತು. ಅದರಲ್ಲಿ ಶಿವಮೊಗ್ಗ ಮಾರ್ಗವು ಒಂದಾಗಿತ್ತು. ಈಗಲು ಸ್ಪೈಸ್‌ ಜೆಟ್‌ ವಿವಿಧ ಮಾರ್ಗಗಳ ಸೇವೆಯಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸುದ್ದಿಯಾಗುತ್ತಲೆ ಇದೆ.

ಸಂಸ್ಥೆ: ಸ್ಟಾರ್‌ ಏರ್‌

ಮಾರ್ಗ: ಶಿವಮೊಗ್ಗದಿಂದ ಹೈದರಾಬಾದ್‌, ತಿರುಪತಿ, ಗೋವಾ

2023ರ ನವೆಂಬರ್‌ 1ರಿಂದ ಮಲೆನಾಡಿನ ಆಗಸದಲ್ಲಿ ಸ್ಟಾರ್‌ ಏರ್‌ ವಿಮಾನದ ಸದ್ದು ಕೇಳಲು ಆರಂಭವಾಗಿತ್ತು. ಎಲ್ಲ ಮಾರ್ಗಗಳಿಗು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ದಿಢೀರ್‌ ಬೆಳವಣಿಗೆ ಮಧ್ಯೆ ಸ್ಟಾರ್‌ ಏರ್‌ ಸಂಸ್ಥೆ ಮೂರು ಮಾರ್ಗದ ಟಿಕೆಟ್‌ ಬುಕಿಂಗ್‌ ಸ್ಥಗಿತಗೊಳಿಸಿದೆ. 2026ರ ನವೆಂಬರ್‌ 21ರಂದು ಕೊನೆಯ ಬಾರಿ ವಿಮಾನ ಹಾರಾಟ ನಡೆಸಲಿದೆ ಎಂದು ತಿಳಿಸಲಾಗಿದೆ.

ಕಾರಣವೇನು?: ಉಡಾನ್‌ ಯೋಜನೆ ಅಡಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೀಡಲಾಗುತ್ತಿದ್ದ ಸಹಾಯಧನ ಕೊನೆಯಾಗಲಿದೆ. ಹಾಗಾಗಿ ಈ ಮಾರ್ಗದ ವಿಮಾನ ಸೇವೆ ಸ್ಥಗಿತಗೊಳಿಸುವುದು ಸ್ಟಾರ್‌ ಏರ್‌ಗೆ ಅನಿವಾರ್ಯವಾಗಿದೆ.