ಶಿವಮೊಗ್ಗ: ಭದ್ರಾ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣವೇ 20 ದಿನಗಳ ಕಾಲ ನೀರು ಹರಿಸಬೇಕು ಎಂದು ಆಗ್ರಹಿಸಿ ಭದ್ರಾ ಎಡ ನಾಲೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಹಾಗೂ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. (ಈ ಸುದ್ದಿಯನ್ನು ಇನ್ನು 66 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಕಳೆದ 30 ದಿನಗಳಿಂದ ಮಳೆ ಹಾಗೂ ಕಾಲುವೆ ನೀರಿಲ್ಲದೆ ಬೆಳೆದು ನಿಂತಿರುವ ತೋಟಗಳು ಒಣಗುತ್ತಿವೆ. ಕಾಲುವೆಗೆ ನೀರು ಬಿಟ್ಟರೂ ಕೊನೆಯ ಭಾಗ ತಲುಪಲು 15 ದಿನ ಬೇಕಾಗುತ್ತದೆ. ಆದ್ದರಿಂದ ಬೆಳೆಗಳು ನಾಶವಾಗುವ ಮುನ್ನವೇ ತಕ್ಷಣ ಎಡದಂಡೆ ನಾಲೆಗೆ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನೀರಾವರಿ ಸಲಹಾ ಸಮಿತಿ ಸಭೆ ಕರೆದು ಡಿಸೆಂಬರ್ 25 ರಿಂದ ಮೇ 31 ರವರೆಗೆ ಬೇಸಿಗೆಗೆ ನೀರು ಹರಿಸುವ ವೇಳಾಪಟ್ಟಿ ನೀಡಬೇಕು. ಭದ್ರಾ ಮೇಲ್ದಂಡೆ ಕಾಲುವೆಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು ಹಾಗೂ ತುಂಗಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ವರ್ಷದ ಎಲ್ಲಾ ತಿಂಗಳುಗಳಲ್ಲೂ ಕನಿಷ್ಠ 20 ದಿನ ನಾಲೆಗಳಲ್ಲಿ ನೀರು ಹರಿಸಬೇಕು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಿ ಜೀರ್ಣೋದ್ಧಾರ ಮಾಡಬೇಕು. ಮಳೆಗಾಲದಲ್ಲಿ ಭತ್ತ ಬೆಳೆಯದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಪ್ರತಿಭಟನೆ ಹಾಗೂ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಚಳವಳಿಯ ಹಿರಿಯ ಸಂಸ್ಥಾಪಕ ಸದಸ್ಯ ಕೆ.ಟಿ. ಗಂಗಾಧರ್, ಪುಟ್ಟಪ್ಪ, ಯಶವಂತರಾವ್ ಗೋರ್ಪಡೆ, ಜೆ. ರಘುನಾಥ್, ಕೆ. ಜಗದೀಶ್, ಮಂಜುನಾಥ್, ಮೋಹನ್ ಕುಮಾರ್, ಬಸವರಾಜ್, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.