ಶಿವಮೊಗ್ಗಕ್ಕೆ ಜಪಾನ್‌ ಡಾಕ್ಟರ್‌, ಎರಡು ದಿನ ಮಹತ್ವದ ಚರ್ಚೆ, ಕಾರ್ಯಾಗಾರ, ಎಲ್ಲಿ? ಏನಿದು?

ಶಿವಮೊಗ್ಗ: ನಗರದ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಜಪಾನ್‌ನ ಏಷ್ಯಾ ವೈದ್ಯರ ಸಂಘಟನೆ ಸಹಯೋಗದಲ್ಲಿ ನವೆಂಬರ್ 18 ಹಾಗೂ 19 ರಂದು ವಿಪತ್ತು ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ನಾಗೇಂದ್ರ ತಿಳಿಸಿದರು. (ಈ ಸುದ್ದಿಯನ್ನು ಇನ್ನು 74 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ‘ಜಾಗತಿಕ ವಾಸ್ತವಗಳು, ಪ್ರಾದೇಶಿಕ ಸ್ಥಿತಿಸ್ಥಾಪಕತ್ವ’ ಎಂಬ ಧ್ಯೇಯವಾಕ್ಯದಡಿ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಸಮ್ಮೇಳನ ಉದ್ಘಾಟನೆಯಾಗಲಿದೆ ಎಂದರು.

Conference-at-Subbaiah-Hospital-in-Shivamogga

ವಿಪತ್ತು ಸಂಭವಿಸಿದಾಗ ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಒದಗಿಸಿ ಜೀವ ರಕ್ಷಿಸುವುದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿ ಸನ್ನದ್ಧಗೊಳಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಜಪಾನ್ ಸೇರಿದಂತೆ ವಿವಿಧ ಭಾಗಗಳಿಂದ 268 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹಭಾಗಿತ್ವ ನೀಡಿದ್ದು, ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ಕಾರ್ಯಾಗಾರಗಳು ನಡೆಯಲಿವೆ ಎಂದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಜಪಾನ್‌ನ ಎಎಂಡಿಎ ಸಂಸ್ಥಾಪಕ ಡಾ. ಶಿಗೆರು ಸುಗನಾಮಿ ಮುಖ್ಯ ಅತಿಥಿಯಾಗಿ ಹಾಗೂ ಎನ್‌ಡಿಎಮ್‌ಎ ಪ್ರತಿನಿಧಿ ಡಾ. ಪೂಜಾ ಸಕ್ಸೇನಾ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕೆ ಕರ್ನಾಟಕ ವೈದ್ಯಕೀಯ ಪರಿಷತ್ತಿನ 3 ಕ್ರೆಡಿಟ್ ಅಂಕಗಳ ಮಾನ್ಯತೆ ದೊರೆತಿದೆ ಎಂದು ವಿವರಿಸಿದರು.

ಡಾ. ಶಿಗೆರು ಸುಗನಾಮಿ ಮಾತನಾಡಿ, ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಿ, ಜಿಲ್ಲಾ ಮಟ್ಟದಲ್ಲಿ ಪರಿಣತ ತಂಡವನ್ನು ಸಿದ್ಧಪಡಿಸುವ ಉದ್ದೇಶದಿಂದ ಸುಬ್ಬಯ್ಯ ಸಂಸ್ಥೆಯು ಜಪಾನ್‌ನ ಎಎಂಡಿಎ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದರು.  

ಸುದ್ದಿಗೋಷ್ಠಿಯಲ್ಲಿ ಎಎಂಡಿಎ ಇಂಡಿಯಾ ಅಧ್ಯಕ್ಷ ಡಾ. ಎಂ.ಎಸ್. ಕಾಮತ್, ಡಾ. ರಾಮಚಂದ್ರ ಕಾಮತ್, ಡಾ. ಲತಾ ಆರ್. ತೆಲಂಗ್, ನಿರಂಜನ್ ಕಾಂಬ್ಳೆ, ಡಾ. ಜಿ. ವಿನಾಯಕ್ ಹಾಗೂ ಡಾ. ವಿನಯ ಶ್ರೀನಿವಾಸ್ ಉಪಸ್ಥಿತರಿದ್ದರು.