ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಫೈನಾನ್ಸ್‌ನಲ್ಲಿ ಅಡವಿಟ್ಟ ಬಂಗಾರವನ್ನು ಬಿಡಿಸಿ ಮಾರಾಟ ಮಾಡಲು ನೀಡುವುದಾಗಿ ನಂಬಿಸಿ ಚಿನ್ನದ ವ್ಯಾಪಾರಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಭದ್ರಾವತಿಯಲ್ಲಿ ಚಿನ್ನದ ವ್ಯಾಪಾರ ಮಾಡುವ ಸುಹೇಲ್ ಪಾಷಾ ಅವರಿಗೆ ಸೈಯದ್ ಮುಜಾಮಿಲ್ ಪರಿಚಯವಾಗಿತ್ತು. ಬಜಾಜ್ ಫೈನಾನ್ಸ್‌ನಲ್ಲಿ ಸ್ನೇಹಿತನ ಹೆಸರಿನಲ್ಲಿ 200 ಗ್ರಾಂ ಬಂಗಾರ ಅಡವಿಟ್ಟಿರುವುದಾಗಿ ಆತ ತಿಳಿಸಿದ್ದ. ಫೈನಾನ್ಸ್ ಸಂಸ್ಥೆಯ ಚೀಟಿಯ ಫೋಟೋಗಳನ್ನು ತೋರಿಸಿ ನಂಬಿಸಿದ್ದ. ಹಣ ನೀಡಿದರೆ ಆಭರಣಗಳನ್ನು ಬಿಡಿಸಿ ಮಾರಾಟ ಮಾಡಲು ಕೊಡುವುದಾಗಿ ಸುಹೇಲ್ ಪಾಷಾಗೆ ಆತ ಭರವಸೆ ನೀಡಿದ್ದ.

ಶಿವಮೊಗ್ಗದ ಗಾಂಧಿಬಜಾರ್‌ನ ಕುಚಲಕ್ಕಿ ಕೇರಿಗೆ ಚಿನ್ನದ ವ್ಯಾಪಾರಿ ಸುಹೇಲ್ ಪಾಷಾ ಅವರನ್ನು ಕರೆಯಿಸಿದ ಸೈಯದ್ ಮುಜಾಮಿಲ್, ಅಲ್ಲಿನ ಅಂಗಡಿಯಲ್ಲಿ ಕೂರಿಸಿ ₹13,50,000 ಹಣ ಪಡೆದಿದ್ದ. ಈ ವೇಳೆ ಆತನ ಪತ್ನಿ ಹಾಗೂ ತಂದೆ ಕೂಡ ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ಪಡೆದ ಮುಜಾಮಿಲ್ ಹಾಗೂ ಆತನ ಪತ್ನಿ ಚಿನ್ನವನ್ನು ಫೈನಾನ್ಸ್ ಸಂಸ್ಥೆಯಿಂದ ಬಿಡಿಸಿಕೊಂಡು ತರವುದಾಗಿ ತಿಳಿಸಿದ್ದರು. ಅವರ ಬೈಕ್ ಅನ್ನು ಅಲ್ಲೇ ಬಿಟ್ಟು ಹೋಗಿದ್ದರು. ಆದರೆ ಬಹುಹೊತ್ತು ಕಳೆದರೂ ದಂಪತಿ ಬಾರದೆ ಇದ್ದಾಗ ಸುಹೇಲ್ ಪಾಷಾ ಫೋನ್ ಮಾಡಿದ್ದಾರೆ. ಈ ವೇಳೆ ಸೈಯದ್ ಮುಜಾಮಿಲ್‌ನ ಫೋನ್ ಸ್ವಿಚ್ ಆಫ್ ಬಂದಿದೆ ಎಂದು ಆರೋಪಿಸಲಾಗಿದೆ.
ಸೈಯದ್ ಮುಜಾಮಿಲ್‌ನ ಮನೆಗೆ ತೆರಳಿ ವಿಚಾರಿಸಿದಾಗ ಮನೆಗೆ ಬೀಗ ಹಾಕಿರುವುದು ತಿಳಿದುಬಂದಿದೆ. ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆ ಸುಹೇಲ್ ಪಾಷಾ ಅವರು ಕೋಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.