ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ನಗರದ ಖಾಸಗಿ ಕಂಪನಿಯೊಂದರ ಅಕೌಂಟೆಂಟ್‌ಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿದ ಸೈಬರ್ ವಂಚಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಂತೆ ನಟಿಸಿ ಖಾತೆಯಲ್ಲಿದ್ದ ₹8 ಲಕ್ಷ ಹಣವನ್ನು ದೋಚಿದ್ದಾರೆ.

ಶಿವಮೊಗ್ಗದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಈ ಸಮಯದಲ್ಲಿ ಅವರ ಹೆಸರಿನ ನಕಲಿ ವಾಟ್ಸಾಪ್ ಖಾತೆಯಿಂದ ಅಕೌಂಟೆಂಟ್‌ಗೆ ಮೆಸೇಜ್ ಬಂದಿತ್ತು. ಕಂಪನಿಯ ಬ್ಯಾಂಕ್ ಖಾತೆಯಲ್ಲಿನ ಬಾಕಿ ಹಣದ ಮಾಹಿತಿ ಕೇಳಿದ ವಂಚಕ, ತಕ್ಷಣವೇ ಹಣವನ್ನು ನಿರ್ದಿಷ್ಟ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
₹8 ಲಕ್ಷ ಹಣ ವರ್ಗಾವಣೆ
ಕಂಪನಿಯ ಎಂ.ಡಿ. ಅವರೇ ಮೆಸೇಜ್ ಕಳುಹಿಸಿದ್ದಾರೆ ಎಂದು ನಂಬಿದ ಅಕೌಂಟೆಂಟ್, ಅವರು ನೀಡಿದ ಐಸಿಐಸಿಐ ಬ್ಯಾಂಕ್ ಖಾತೆಗೆ ₹8 ಲಕ್ಷವನ್ನು ಚೆಕ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಎಂ.ಡಿ.ಗೆ ಕರೆ ಸಮಾಡಿದಾಗ ಕರೆಯನ್ನು ಸ್ವೀಕರಿಸದ ವಂಚಕ, ಮೀಟಿಂಗ್‌ನಲ್ಲಿದ್ದೇನೆ ಎಂದು ಮೆಸೇಜ್ ಕಳುಹಿಸಿದ್ದರು. ಇದರಿಂದ ಮಂಜುನಾಥ್ ಅವರು ಅದನ್ನು ನಂಬಿ ಹಣ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವು ಸಮಯದ ನಂತರ ಸ್ವತಃ ಕಂಪನಿಯ ಎಂ.ಡಿ. ಶಶಿಕುಮಾರ್ ಅವರು ಅಕೌಂಟೆಂಟ್‌ಗೆ ಕರೆ ಮಾಡಿದ್ದಾರೆ. ಖಾತೆಯಿಂದ ಹಣ ಕಡಿತಗೊಂಡಿರುವ ಕುರಿತು ಮೆಸೇಜ್ ಬಂದಿರುವುದನ್ನು ಗಮನಿಸಿದ ಅವರು, ಹಣ ವರ್ಗಾವಣೆ ಬಗ್ಗೆ ವಿಚಾರಿಸಿದ್ದಾರೆ. ಆಗ ಮಂಜುನಾಥ್ ಅವರಿಗೆ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.