ಶಿವಮೊಗ್ಗ: ಅಕ್ರಮವಾಗಿ ಪಡೆಯಲಾಗಿದ್ದ ವಿದ್ಯುತ್ ಸಂಪರ್ಕವನ್ನು ಪರಿಶೀಲಿಸಲು ತೆರಳಿದ್ದ ಮೆಸ್ಕಾಂ ಜ್ಯೂನಿಯರ್ ಪವರ್ಮ್ಯಾನ್ ಮೇಲೆ ವ್ಯಕ್ತಿಯೊಬ್ಬ ಕಲ್ಲು, ದೊಣ್ಣೆಯಿಂದ ಹಲ್ಲೆ ನಡೆಸಿ, ಕೊಡಲಿಯಿಂದ ದಾಳಿಗೆ ಯತ್ನಿಸಿ ಜೀವಬೆದರಿಕೆ ಒಡ್ಡಿದ್ದಾನೆ. (ಈ ಸುದ್ದಿಯನ್ನು ಇನ್ನು 46 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಜ್ಯೂನಿಯರ್ ಪವರ್ಮ್ಯಾನ್ ಮಂಜುನಾಥ್ ಕೆ.ಎಸ್. ಎಂಬುವವರ ಮೇಲೆ ಹಲ್ಲೆಯಾಗಿದೆ. ಮಂಜುನಾಥ್ ಅವರು ಸೋಮಿನಕೊಪ್ಪದ ಭೋವಿ ಕಾಲೋನಿಯಲ್ಲಿ ವಿದ್ಯುತ್ ಬಾಕಿ ಇರುವ ಸ್ಥಾವರಗಳ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ವಿದ್ಯುತ್ ಬಿಲ್ ಬಾಕಿ ಇದ್ದು, ಕಳೆದ 3 ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಸ್ಥಾವರದ ಪರಿಶೀಲನೆಗೆ ತೆರಳಿದ್ದರು. ಆದರೆ ಆ ಮನೆಯವರು ಪಕ್ಕದ ಮನೆಯಿಂದ ಅಕ್ರಮವಾಗಿ ವೈರ್ ಮೂಲಕ ವಿದ್ಯುತ್ ಸಂಪರ್ಕ ಪಡೆದು ಬಳಸುತ್ತಿರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜ್ಯೂನಿಯರ್ ಪವರ್ಮ್ಯಾನ್ ಮಂಜುನಾಥ್ ಇದನ್ನು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಬಳಿಕ ಸಮವಸ್ತ್ರ ಹರಿದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ರಕ್ಷಣೆಗೆ ಬಂದಾಗ ಕೊಡಲಿ ಹಿಡಿದು ದಾಳಿಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಾಳು ಮಂಜುನಾಥ್ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.