ಶಿವಮೊಗ್ಗ ಲೈವ್.ಕಾಂ | SHIMOGA | 12 ನವೆಂಬರ್ 2019
ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪ್ರಕರಣದ ತನಿಖೆಗೆ ದಾವಣಗೆರೆಯಿಂದ ವಿಶೇಷ ತಂಡವೊಂದು ಶಿವಮೊಗ್ಗಕ್ಕೆ ಆಗಮಿಸಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಘಟನೆ ಏನಾಗಿದೆ? ಮೃತ ವಿದ್ಯಾರ್ಥಿ ಯಾರು?
ಸುಬ್ಬಯ್ಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ನಿತಿನ್ (23), ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪುರಲೆಯ ಮೂರನೆ ಕ್ರಾಸ್’ನಲ್ಲಿರುವ ರೂಂನಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ನಿತಿನ್ ರೂಂನಿಂದ ಹೊಗೆ ಬರುತ್ತಿರುವುದನ್ನು ಸ್ಥಳೀಯರು ಮತ್ತು ಸ್ನೇಹಿತರು ಗಮನಿಸಿದ್ದಾರೆ. ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸಮೀಪದ ಸುಬ್ಬಯ್ಯ ಆಸ್ಪತ್ರೆಗೆ ಕರೆದೊಯ್ದಾಗ, ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪೊಲೀಸರಿಗೆ ಬೇರೆಯದ್ದೇ ಅನುಮಾನ
ಐರನ್ ಬಾಕ್ಸ್ ಶಾರ್ಟ್ ಸರ್ಕಿಟ್ ಆಗಿ ವಿದ್ಯುತ್ ಶಾಕ್’ನಿಂದ ನಿತಿನ್ ಸಾವನ್ನಪ್ಪಿರುವುದಾಗಿ ಆರಂಭದಲ್ಲಿ ಶಂಕೆ ವ್ಯಕ್ತಪಡಿಸಲಾಗಿತ್ತು. ರೂಂನಲ್ಲಿದ್ದ ಹಾಸಿಗೆ ಅರ್ಧ ಭಾಗ ಸುಟ್ಟು ಹೋಗಿತ್ತು. ಸ್ಥಳಕ್ಕೆ ತೆರಳಿದ್ದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರಿಗೆ ಬೇರೆಯದ್ದೆ ಅನುಮಾನ ಮೂಡಿದೆ. ಈ ಹಿನ್ನೆಯಲ್ಲಿ ಪ್ರಕರಣದ ತನಿಖೆಗೆ ದಾವಣೆಗೆರೆಯಿಂದ ವಿಶೇಷ ತಂಡ ಕರೆಸಿಕೊಳ್ಳಲಾಗಿತ್ತು.
ದಾವಣಗೆರೆಯಿಂದ ಸ್ಪೆಷಲ್ ಟೀಂ
ಪ್ರಕರಣದ ತನಿಖೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯದ ಸ್ಪೆಷಲ್ ಸೀನ್ ಆಫ್ ಕ್ರೈಂ ಯುನಿಟ್’ನ ಡಾ.ನಾಗರಾಜ್ ಮತ್ತು ಡಾ.ವಿನೋದ್ ಅವರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ಪ್ರಕರಣ ನಡೆದ ಸ್ಥಳ ಮತ್ತು ನಿತಿನ್ ಮೃತದೇಹದ ಪರಿಶೀಲನೆ ನಡೆಸಿದ್ದಾರೆ.
ಏನೆಲ್ಲ ಅನುಮಾನ ಮೂಡಿದೆ?
ಎಂಬಿಬಿಎಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದ ನಿತಿನ್, ಇನ್ನೊಂದು ತಿಂಗಳು ಪೂರೈಸಿದ್ದರೆ ಪೂರ್ಣ ಪ್ರಮಾಣದ ಡಾಕ್ಟರ್ ಆಗುತ್ತಿದ್ದ. ‘ಓದಿನಲ್ಲಿ ಹೆಚ್ಚು ಆಸಕ್ತಿ ಇತ್ತು. ಚಟುವಟಿಕೆಯಿಂದ ಇದ್ದ ವಿದ್ಯಾರ್ಥಿ’ ಅನ್ನುತ್ತಾರೆ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಪ್ರಮುಖ ಆದಿಶೇಷ. ‘ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದ ನಿತಿನ್ ಇತ್ತೀಚೆಗೆ ಕೆಲವು ದಿನದಿಂದ ಡಲ್ ಆಗಿದ್ದ. ಆದರೆ ಅದಕ್ಕೆ ಕಾರಣ ಗೊತ್ತಿಲ್ಲ’ ಅನ್ನುತ್ತಾರೆ ಮೃತ ನಿತಿನ್ ಸ್ನೇಹಿತ ರಾಹುಲ್.
‘ಮೂರು ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆಗಿದ್ದರು. ಒಳ್ಳೆಯ ಹುಡುಗ. ನಿನ್ನೆ ಸಂಜೆ ನಮ್ಮ ಮಗಳು ಮೇಲೆ ಹೋದಾಗ ರೂಂನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ತಿಳಿಸಿದ್ದಳು. ಐರನ್ ಬಾಕ್ಸ್’ನಿಂದಾಗಿ ಆಗಿದ್ದು ಅನ್ನುತ್ತಿದ್ದಾರೆ. ಆದರೆ ಇನ್ನು ಏನು ಅಂತಾ ಗೊತ್ತಾಗಿಲ್ಲ’ ಅನ್ನುತ್ತಾರೆ ಮನೆ ಮಾಲೀಕರಾದ ಕಾತ್ಯಾಯಿನಿ.
ಆದರೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಮೆಸ್ಕಾಂ ಶಿವಮೊಗ್ಗ ಇನ್ಸ್’ಪೆಕ್ಟರ್ ಸಿದ್ದಪ್ಪ ‘ರೂಂನಲ್ಲಿರುವ ಫ್ಯಾನು, ವಿದ್ಯುತ್ ದೀಪಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಸ್ವಿಚ್ ಬೋರ್ಡ್ ಕೂಡ ಚೆನ್ನಾಗಿದೆ. ಐರನ್ ಬಾಕ್ಸ್’ ವಯರ್ ಸ್ವಲ್ಪ ಸುಟ್ಟಿದೆ. ಇದರ ಹೊರತು ಇದು ವಿದ್ಯುತ್’ನಿಂದ ಸಂಭವಿಸಿದ ಅವಘಡ ಅಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಉಳಿದದ್ದು ತನಿಖೆಯಾಗಬೇಕಿದೆ’ ಎಂದು ತಿಳಿಸಿದ್ದಾರೆ.
ಹಾಗಾದರೆ ಇದು ಆತ್ಮಹತ್ಯೆನಾ?
ಮತ್ತೊಂದೆಡೆ ಮೆಡಿಕಲ್ ವಿದ್ಯಾರ್ಥಿ ನಿತಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅನ್ನುವ ಅನುಮಾನವು ಮೂಡಿದೆ. ಈ ಆಂಗಲ್’ನಿಂದಲು ತನಿಖೆ ನಡೆಸಲಾಗುತ್ತಿದೆ. ‘ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಚಾನ್ಸ್ ಇಲ್ಲ. ಅವನು ಎಂ.ಡಿ ಮಾಡಬೇಕು ಅಂತಾ ಇದ್ದ ವ್ಯಕ್ತಿ. ರೀಸರ್ಚ್ ಮಾಡಬೇಕು. ಭಗವದ್ಗೀತೆಯನ್ನು ಸೈನ್ಸ್’ನಲ್ಲಿ ಕನ್ವರ್ಟ್ ಮಾಡಿ, ಪುಸ್ತಕ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹಿಂದಿನ ದಿನವು ನಾನು ಅವನೊಂದಿಗೆ ಮಾತನಾಡಿದ್ದೇನೆ’ ಅನ್ನುತ್ತಾರೆ ನಿತಿನ್ ತಂದೆ ಡಾ.ಚಿದಾನಂದ.
ತುಂಬಾ ನಿಗೂಢವಾಗಿದೆ ಸಾವು
ನಿತಿನ್ ಸಾವಿನ ಕುರಿತು ಆತನ ಸಂಬಂಧಿಗಳು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ. ‘ಸಾವು ತುಂಬಾನೆ ನಿಗೂಢವಾಗಿದೆ. ನಾವು ಯೋಚಿಸುವುದಕ್ಕು, ಇಲ್ಲಿ ಸಂಭವಿಸಿರುವುದಕ್ಕೂ ಸಂಬಂಧವೆ ಇಲ್ಲದಂತಾಗಿದೆ. ಸ್ನಾನ ಮಾಡಿ ಬರುವ ಹುಡುಗ ಎಲ್ಲ ಸ್ಪ್ರೇಗಳನ್ನು ಮುಂದಿಟ್ಟುಕೊಳ್ಳುವುದಿಲ್ಲ. ಇದು ಸೂಸೈಡ್ ಅಲ್ಲ, ಸಹಜ ಸಾವು ಅಲ್ಲ. ಬೇರೆ ಎನೋ ಅಗಿದೆ’ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ ಸಹೋದರ ಸಂಬಂಧಿ ಮಂಜುನಾಥ.
‘ಸರಿಯಾದ ತನಿಖೆ ನಡೆಸಲಿದ್ದೇವೆ..’
‘ಪ್ರಕರಣ ಗಂಭೀರ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಅವರಿಗೆ ಸೂಚನೆ ನೀಡಿದ್ದೇನೆ. ಘಟನಾ ಸ್ಥಳದ ಪರಿಶೀಲನೆಗಾಗಿ ವಿವಿಧ ಇಲಾಖೆಯ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದೆವು’ ಅನ್ನುತ್ತಾರೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]