ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | MURDER | 03 ಮೇ 2022
ಮದುವೆಗೆ ಹುಡುಗಿಯ ಫೋಟೊ ತೋರಿಸುವುದಾಗಿ ನಂಬಿಸಿ ಮನೆಗೆ ಕರೆಯಿಸಿಕೊಂಡು ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ರಾಜಕೀಯ ದ್ವೇಷ ಮತ್ತು ಮಹಿಳೆಯೊಬ್ಬಳ ಜೊತೆಗಿನ ಸಲುಗೆಯೆ ಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಸೊರಬ ತಾಲೂಕು ಮನ್ಮನೆ ಗ್ರಾಮದ ಲೇಖಪ್ಪ (36) ಕೊಲೆಯಾದ ವ್ಯಕ್ತಿ. ಆರೋಪಿ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ನಿಗೂಢವಾಗಿತ್ತು ನಾಪತ್ತೆ ಪ್ರಕರಣ
ಏಪ್ರಿಲ್ 11ರಂದು ಜಮೀನಿನಲ್ಲಿ ಕೆಲಸ ಮಾಡಲು ಲೇಖಪ್ಪ ಮನೆಗೆ ತೆರಳಿದ್ದ. ಎರಡು ದಿನವಾದರೂ ಮನೆಗೆ ಹಿಂತಿರುಗಿರಲಿಲ್ಲ. ಕುಟುಂಬದವರು ಎಲ್ಲೆಡೆ ಹುಡುಕಾಡಿದ್ದರು. ಬಳಿಕ ಏಪ್ರಿಲ್ 14ರಂದು ಸೊರಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಉಳಿದ ನಾಪತ್ತೆ ಪ್ರಕರಣಗಳಂತೆಯೆ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದರು.
ಸಹೋದರನಿಂದ ಮತ್ತೊಂದು ದೂರು
ಮೇ 2ರಂದು ಲೇಖಪ್ಪನ ಸಹೋದರ ಸೊರಬ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ನೀಡಿದರು. ತನ್ನ ಸಹೋದರ ಲೇಖಪ್ಪನನ್ನು ತಮ್ಮ ಗ್ರಾಮದ ಕೃಷ್ಣಪ್ಪ ಕೊಲೆ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದರು. ಇದು ಪ್ರಕರಣಕ್ಕೆ ತಿರುವು ನೀಡಿತು. ತನಿಖೆ ಆರಂಭಿಸುತ್ತಿದ್ದಂತೆ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ರಾಜಕೀಯ ದ್ವೇಷ, ಮಹಿಳೆ ಜೊತೆಗಿನ ಸಲುಗೆ
ಲೇಖಪ್ಪ ಮತ್ತು ಕೃಷ್ಣಪ್ಪ ನಡುವೆ ರಾಜಕೀಯ ದ್ವೇಷ ಇತ್ತು. ಇಬ್ಬರ ನಡುವಿನ ರಾಜಕೀಯ ದ್ವೇಷ ಗ್ರಾಮದ ಜನರಿಗೆ ಚೆನ್ನಾಗಿಯೆ ಗೊತ್ತಿತ್ತು. ಅಲ್ಲದೆ ಗ್ರಾಮದ ಮಹಿಳೆಯೊಬ್ಬಳ ಜೊತೆಗೆ ಲೇಖಪ್ಪನಿಗೆ ಸಲುಗೆ ಇತ್ತು. ಅದೆ ಮಹಿಳೆ ಜೊತೆ ಕೃಷ್ಣಪ್ಪ ಕೂಡ ಸಲುಗೆ ಬೆಳೆಸಿಕೊಂಡಿದ್ದ. ತಮ್ಮ ಸಂಬಂಧಕ್ಕೆ ಲೇಖಪ್ಪ ಅಡ್ಡಿಯಾಗುತ್ತಾನೆ ಎಂದು ಭಾವಿಸಿದ ಕೃಷ್ಣಪ್ಪ, ಲೇಖಪ್ಪನ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಹತ್ಯೆಗೆ ರೂಪುರೇಷೆ ಸಿದ್ಧ
ಲೇಖಪ್ಪನ ಸಹೋದರನ ದೂರಿನ ಹಿನ್ನೆಲೆಯಲ್ಲಿ ಕೃಷ್ಣಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ರೂಪುರೇಷೆ ಕುರಿತು ಬಾಯಿ ಬಿಟ್ಟಿದ್ದಾನೆ.
ಲೇಖಪ್ಪನಿಗೆ ಮದುವೆಗೆ ಹುಡುಗಿಯ ಫೋಟೊ ತೋರಿಸುತ್ತೇನೆ ಎಂದು ಕೃಷ್ಣಪ್ಪ ತಿಳಿಸಿದ್ದಾನೆ. ಇದನ್ನು ನಂಬಿಕೊಂಡು ಏಪ್ರಿಲ್ 11ರಂದು ಲೇಖಪ್ಪ, ಕೃಷ್ಣಪ್ಪನ ಮನೆಗೆ ಬಂದಿದ್ದಾನೆ. ಆಗ ಲೇಖಪ್ಪನ ಕುತ್ತಿಗೆಗೆ ಟವೆಲ್ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಲಾಗಿದೆ. ಅದೆ ದಿನ ಸಂಜೆ ಲೇಖಪ್ಪನ ಮೃತದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿಕೊಂಡು ಸಾಗಿಸಲಾಗಿದೆ.
ಬೈಕ್’ನಲ್ಲಿ ಮೃತದೇಹ ಒಯ್ದ
ಗೋಣಿ ಚೀದಲ್ಲಿ ಲೇಖಪ್ಪನ ಮೃತದೇವಹವನ್ನು ಕಟ್ಟಿಕೊಂಡು ಬೈಕ್’ನಲ್ಲಿ ಒಯ್ದಿದ್ದಾಗಿ ಕೃಷ್ಣಪ್ಪ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಮನೆಯಿಂದ ಕಡಸೂರು ಗ್ರಾಮದ ಹೊಳೆವರೆಗೂ ಮೃತದೇಹವನ್ನು ಬೈಕ್’ನಲ್ಲಿಕೊಂಡೊಯ್ದಿದ್ದಾನೆ. ಬಳಿಕ ಮೃತದೇಹವನ್ನು ಹೊಳೆಗೆ ಹಾಕಿದ್ದಾನೆ. ಈ ಪ್ರಕರಣ ಮನ್ಮನೆ ಗ್ರಾಮದಲ್ಲಿ ಆತಂಕ ಹುಟ್ಟಿಸಿದೆ.
ರಾಜಕೀಯ ದ್ವೇಷ ಮತ್ತು ಮಹಿಳೆಯೊಬ್ಬಳ ಜೊತೆಗಿನ ಸಲುಗೆಯೆ ಹತ್ಯೆಗೆ ಪ್ರಮುಖ ಕಾರಣ ಎಂದು ಆರೋಪಿ ಕೃಷ್ಣಪ್ಪ ಒಪ್ಪಿಕೊಂಡಿದ್ದಾನೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಜಿಲ್ಲಾ ರಕ್ಷಣಾಧಿಕಾರಿ ಎಂ.ಬಿ.ಲಕ್ಷ್ಮೀಪ್ರಸಾದ್, ಡಿವೈಎಸ್’ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ರಾಜಶೇಖರ್ ನೇತೃತ್ವದಲ್ಲಿ ಪಿಎಸ್ಐ ದೇವರಾಯ ನೇತೃತ್ವದ ತಂಡ ಪ್ರಕರಣ ಬೇಧಿಸಿದೆ. ಸಿಬ್ಬಂದಿ ನಾಗೇಶ್, ನೀಲೇಂದ್ರ ನಾಯ್ಕ್, ಸಲ್ಮಾನ್ ಖಾನ್ ಹಾಜಿ, ನಾಗರಾಜ್, ಮೆಹಬೂಬ್, ಸಂದೀಪ್, ಉಷಾ, ಮೋಹನ್ ಕುಮಾರ್, ಶಶಿಧರ್, ಕುಮಾರ್, ಶಿವಾಜಿ ರಾವ್, ಸುಚಿತ್ರಾ, ಶಶಿಕಲಾ, ಗೋಪಾಲ್ ತನಿಖೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ – ಶಿವಮೊಗ್ಗ KSRTC ಬಸ್ ನಿಲ್ದಾಣ ಹಿಂಭಾಗ ಯುವಕ ಅರೆಸ್ಟ್
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422