ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SPECIAL NEWS | 4 ಜನವರಿ 2022
ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗ ಪೊಲೀಸರು ವಾಟ್ಸಪ್ ಗ್ರೂಪ್’ಗಳನ್ನು ಆರಂಭಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಟ್ಸಪ್ ಗ್ರೂಪ್’ಗಳು ಕ್ರಿಯೇಟ್ ಆಗುತ್ತಿವೆ. ಈ ಗ್ರೂಪ್’ಗಳ ಮೂಲ ಉದ್ದೇಶ ಶೈಕ್ಷಣಿಕ ವಾತಾವರಣಕ್ಕೆ ತೊಂದರೆ ಮಾಡುವವರಿಗೆ ತಕ್ಕ ಶಾಸ್ತಿ ಮಾಡುವುದಾಗಿದೆ.
ಶಿವಮೊಗ್ಗದ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಯೋಗಿಕವಾಗಿ ವಾಟ್ಸಪ್ ಗ್ರೂಪ್ ಆರಂಭಿಸಲಾಯಿತು. ಇದು ಯಶ ಕಂಡ ಹಿನ್ನೆಲೆಯಲ್ಲಿ ಈಗ ಜಿಲ್ಲೆಯಾದ್ಯಂತ ಗ್ರೂಪ್’ಗಳನ್ನು ಶುರು ಮಾಡಲಾಗುತ್ತಿದೆ.
ಏನಿದು ವಾಟ್ಸಪ್ ಗ್ರೂಪ್?
ಶಾಲೆ ಹಂತದಲ್ಲಿ ಅಪರಾಧ ತಡೆ, ಕಾನೂನು ಜಾಗೃತಿ ಮೂಡಿಸಲು ಪೊಲೀಸರು ಸಭೆಗಳನ್ನು ನಡೆಸಿದರು. ಈ ವೇಳೆ ಮಕ್ಕಳು, ಶಾಲಾ ಸಿಬ್ಬಂದಿಗಳು ಹಲವು ಸಮಸ್ಯೆ ಹೇಳಿಕೊಂಡರು.
‘ಕೆಲವು ಶಾಲೆಗಳಲ್ಲಿ ಗಾಂಜಾ ಹಾವಳಿ ಇದೆ ಎಂದು ದೂರು ಕೇಳಿ ಬಂತು. ಇನ್ನು ಕೆಲವು ಶಾಲೆಗಳಲ್ಲಿ ಹೊರಗಿನವರು ಬಂದು ತೊಂದರೆ ಕೊಡುತ್ತಾರೆ, ರಾತ್ರಿ ವೇಳೆ ಬಂದು ಮದ್ಯ ಸೇವನೆ ಮಾಡುತ್ತಾರೆ, ಸಿಸಿಟಿವಿ ಸೇರಿದಂತೆ ಶಾಲಾ ವಸ್ತುಗಳನ್ನು ಹಾನಿಗೊಳಿಸುವುದು, ಕದ್ದೊಯ್ಯುವುದು ಸೇರಿದಂತೆ ಹಲವು ದೂರುಗಳನ್ನು ಹೇಳಿಕೊಂಡಿದ್ದಾರೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ಈ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಪ್ರತ್ಯೇಕ ವೇದಿಕೆ ಅಗತ್ಯವಿದೆ ಎಂದು ಅರಿತ ಶಿವಮೊಗ್ಗ ಪೊಲೀಸರು, ವಾಟ್ಸಪ್ ಮೊರೆ ಹೋಗಿದ್ದಾರೆ.
ಕೋಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಯೋಗ
ಪ್ರಾಥಮಿಕ ಹಂತದಲ್ಲಿ ಶಿವಮೊಗ್ಗದ ಕೋಟೆ ಠಾಣೆಯಲ್ಲಿ ಪ್ರಯೋಗ ಆರಂಭಿಸಲಾಯಿತು. ಈ ಠಾಣೆ ವ್ಯಾಪ್ತಿಯಲ್ಲಿ 50ಕ್ಕಿಂತಲೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಎಲ್ಲಾ ಶಾಲೆಗಳನ್ನು ಒಳಗೊಂಡ ವಾಟ್ಸಪ್ ಗ್ರೂಪ್ ಆರಂಭಿಸಲಾಯಿತು. ಕೋಟೆ ಠಾಣೆ ಇನ್ಸ್’ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರ ಸಭೆ ನಡೆಸಲಾಯಿತು. ವಾಟ್ಸಪ್ ಗ್ರೂಪ್ ಆರಂಭಿಸಿ, ಮಾಹಿತಿ ವಿನಿಮಯ ಆರಂಭಿಸಲಾಯಿತು.
ಯಾರೆಲ್ಲ ಇರ್ತಾರೆ ಗ್ರೂಪ್’ನಲ್ಲಿ?
ಪೊಲೀಸರು ಆರಂಭಿಸಿರುವ ವಾಟ್ಸಪ್ ಗ್ರೂಪ್’ನಲ್ಲಿ ಡಿವೈಎಸ್’ಪಿ, ಸರ್ಕಲ್ ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್’ಗಳು, ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರು, ಒಬ್ಬ ಶಿಕ್ಷಕರು, ಬಿಇಒ, ಶಿಕ್ಷಣ ಇಲಾಖೆಯ ಅಧಿಕಾರಿ ಇರಲಿದ್ದಾರೆ. ಈ ಗ್ರೂಪ್’ನಲ್ಲಿ ಎಲ್ಲರೂ ಮೆಸೇಜ್ ಮಾಡುವ ಅವಕಾಶವಿರಲಿದೆ.
ಗ್ರೂಪ್ ಹೇಗೆಲ್ಲ ಕೆಲಸ ಮಾಡಲಿದೆ?
ಶಾಲಾ ಆವರಣ, ಸುತ್ತಮುತ್ತಲ ವಾತಾವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾದಾಗ ಗ್ರೂಪ್’ನಲ್ಲಿ ಮೆಸೇಜ್ ಮಾಡಬಹುದು. ತಕ್ಷಣ ಪೊಲೀಸರು ಪ್ರತಿಕ್ರಿಯಿಸಲಿದ್ದಾರೆ.
‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಗ್ರೂಪ್ ಆರಂಭಿಸಲಾಗಿದೆ. ಶಾಲೆಗಳಲ್ಲಿ ಸಮಸ್ಯೆ ಉಂಟಾದರೆ, ಹೊರಗಿನವರಿಂದ ತೊಂದರೆಯಾಗುತ್ತಿದ್ದರೆ, ಶಾಲೆ ಮುಂದೆ ಟ್ರಾಫಿಕ್ ಕಿರಿಕಿರಿಯಾದರೆ, ಗಾಂಜಾ ಸೇರಿದಂತೆ ಯಾವುದೆ ಅಕ್ರಮ ಚಟುವಟಿಕೆ ಕುರಿತು ವಾಟ್ಸಪ್ ಗ್ರೂಪ್’ನಲ್ಲಿ ತಿಳಿಸಬಹುದು. ಆಯಾ ಠಾಣೆಯ ಪೊಲೀಸರು ಕಾರ್ಯಪ್ರವೃತ್ತರಾಗಲು ಅನುಕೂಲವಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಪ್ರತಿ ತಿಂಗಳು ನಡೆಯುತ್ತೆ ಸಭೆ
ವಾಟ್ಸಪ್ ಗ್ರೂಪ್’ನ ಆಚೆಗೆ ಪೊಲೀಸರು ಪ್ರತಿ ತಿಂಗಳು ಸಭೆ ನಡೆಸಲಿದ್ದಾರೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿಯು ಕಾನೂನಾತ್ಮಕ ಸಮಸ್ಯೆಗಳ ಕುರಿತು ತಿಳಿಸಬಹುದಾಗಿದೆ.
ಎಲ್ಲಾ ಠಾಣೆಗಳಲ್ಲೂ ವಾಟ್ಸಪ್ ಗ್ರೂಪ್
ಕೋಟೆ ಠಾಣೆ ವ್ಯಾಪ್ತಿಯಲ್ಲಿ ವಾಟ್ಸಪ್ ಗ್ರೂಪ್ ಪ್ರಯೋಗ ಯಶ ಕಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಠಾಣೆಗಳಲ್ಲಿ ಗ್ರೂಪ್’ಗಳು ಶುರುವಾಗುತ್ತಿವೆ. ‘ತುಂಗಾ ನಗರ ಠಾಣೆಯಲ್ಲಿ ಶುರು ಮಾಡಿದ್ದಾರೆ. ತೀರ್ಥಹಳ್ಳಿ ಠಾಣೆ ವ್ಯಾಪ್ತಿಯಲ್ಲಿಯೂ ವಾಟ್ಸಪ್ ಗ್ರೂಪ್’ಗಳನ್ನು ಪ್ರಾರಂಭಿಸಿದ್ದಾರೆ. ಹಂತ ಹಂತವಾಗಿ ಜಿಲ್ಲೆಯ ಎಲ್ಲಾ ಠಾಣೆಗಳಲ್ಲೂ ಗ್ರೂಪ್’ಗಳು ಶುರು ಮಾಡಲಿದ್ದೇವೆ’ ಎಂದು ಎಸ್.ಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಗಾಂಜಾ ಹಾವಳಿ ತಡೆ, ಅಪರಾಧ ಚಟುವಟಿಕೆ ನಿಯಂತ್ರಣ, ಹೊರಗಿನವರು ವಿನಾಕಾರಣ ಕ್ಯಾಂಪಸ್’ಗೆ ಬಂದು ಕಿರಿಕಿರಿ ಮಾಡುವುದನ್ನು ತಡೆಯಲಿದೆ. ಅಲ್ಲದೆ ವಿದ್ಯಾರ್ಥಿಗಳು, ಪೋಷಕರು ನಿರಾತಂಕವಾಗಿ ಇರಬಹುದಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422