ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 DECEMBER 2022
ಶಿವಮೊಗ್ಗ : ಜಿಲ್ಲೆಯ ಪೊಲೀಸರು 283 ಕಳ್ಳತನ ಪ್ರಕರಣಗಳನ್ನು ಭೇದಿಸಿ 4.32 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದರು. ಕಳ್ಳತನವಾಗಿದ್ದ ವಸ್ತುಗಳನ್ನು ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದ ಪ್ರಾಪರ್ಟಿ ರಿಟರ್ನ್ ಪರೇಡ್ ನಲ್ಲಿ (property return parade) ವಾರುಸದಾರರಿಗೆ ಹಿಂದಿರುಗಿಸಲಾಯಿತು.
(property return parade)
ಎಷ್ಟು ಪ್ರಕರಣಗಳು?
2022ರಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 633 ವಿವಿಧ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪೊಲೀಸರು 238 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಅದರಲ್ಲಿ 1 ಲಾಭಕ್ಕಾಗಿ ಕೊಲೆ, 5 ದರೋಡೆ, 24 ಸುಲಿಗೆ, 56 ಕನ್ನ ಕಳ್ಳವು, 46 ಸಾಮಾನ್ಯ ಕಳವು, 4 ಜಾನುವಾರು ಕಳವು, 99 ವಾಹನ ಕಳವು, 5 ವಂಚನೆ ಪ್ರಕರಣಗಳಿವೆ.
3.80 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು, ಎಲೆಕ್ಟ್ರಾನಿಕ್ ವಸ್ತುಗಳು, ಅಡಕೆ ಮತ್ತು ಇತರೆ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
(property return parade)
ಹಿಂದಿನ ವರ್ಷಗಳ ಕೇಸ್ ಪತ್ತೆ
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದಿನ ವರ್ಷದ ಕೇಸ್ ಗಳು ಕೂಡ ಪತ್ತೆಯಾಗಿವೆ. ಸಿಕ್ಕ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. 4 ಸುಲಿಗೆ, 12 ಕನ್ನ ಕಳವು, 9 ಸಾಮಾನ್ಯ ಕಳವು ಮತ್ತು 20 ವಾಹನ ಕಳವು ಸೇರಿ 45 ಪ್ರಕರಣಗಳು ಪತ್ತೆಯಾಗಿವೆ. 51.79 ಲಕ್ಷ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಲಾಗಿದೆ.
2022 ಮತ್ತು ಹಿಂದಿನ ವರ್ಷಗಳ ಕೇಸುಗಳು ಸೇರಿ ಒಟ್ಟು 283 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 4.32 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಏನಂದರು ಜನ?
ಮುರಳೀಧರ್, ಬಸವನಗುಡಿ – ‘ಕುಟುಂಬದವರು ಗೋಕರ್ಣ ತೆರಳಿದ್ದಾಗ ಮನೆಯಲ್ಲಿ ಕಳ್ಳತನವಾಗಿತ್ತು. 3 ದಿನದಲ್ಲಿ ಜಯನಗರ ಠಾಣೆ ಪೊಲೀಸರು ಕಳ್ಳರನ್ನು ಪತ್ತೆ ಮಾಡಿದರು.’
ದೇವೇಂದ್ರಪ್ಪ, ಅರ್ಚಕರು, ಶನೈಶ್ಚರ ದೇವಸ್ಥಾನ, ನಗರ – ‘ಚಂದ್ರ ಗ್ರಹಣದ ಸಂದರ್ಭ ದೇವಸ್ಥಾನದ ವಸ್ತುಗಳನ್ನು ತೊಳೆಯಲು ಇಟ್ಟಿದ್ದೆವು. ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ರಕ್ತೇಶ್ವರಿ, ಗಣಪತಿ ವಿಗ್ರಹಗಳನ್ನು ಹೊತ್ತುಕೊಂಡು ಪರಾರಿಯಾಗಿದ್ದ. ನಗರ ಠಾಣೆಗೆ ದೂರು ನೀಡಿದ್ದೆವು. ಪತ್ತೆ ಹಚ್ಚಿ, ದೇವಸ್ಥಾನದ ವಸ್ತುಗಳನ್ನು ಹಿಂತಿರುಗಿಸಿದ್ದಾರೆ.’
ಎಲಿಜಬೆತ್ ಕ್ಯಾಸ್ತಲಿನೊ, ಕೊಡಗು ಜಿಲ್ಲೆ – ‘ಲಷ್ಕರ್ ಮೊಹಲ್ಲಾದಲ್ಲಿ ತಂಗಿ ಮನೆಗೆ ಬಂದಿದ್ದೆ. ಸಮೀಪದ ಚರ್ಚ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬರುವಾಗ ಕೊರಳಲ್ಲಿದ್ದ ಚೈನ್ ಕಳ್ಳತನವಾಯಿತು. ಪೊಲೀಸರಿಗೆ ದೂರು ಕೊಟ್ಟಿದ್ದೆವು. ಬೇಗ ಹುಡುಕಿಕೊಟ್ಟರು.’
ಇಂದ್ರಾಣಿ, ವೃದ್ಧೆ – ‘ಹುಷಾರಿಲ್ಲ ಅಂತಾ ಮಗಳ ಮನೆಗೆ ಹೋಗಿದ್ದೆ. ನಮ್ಮ ಮನೆಯಲ್ಲಿದ್ದ ಒಡವೆಗಳು ಕಳ್ಳತನವಾಗಿದ್ದವು. ಪೊಲೀಸರು ಬೇಗ ಹುಡಿಕಿಕೊಟ್ಟರು.’
ಜಿಲ್ಲಾ ರಕ್ಷಣಾಧಿಕಾರಿ ಏನಂದರು?
ಇದೇ ವೇಳೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ‘ಪ್ರತಿ ಪ್ರಕರಣ ಭೇದಿಸಲು ಸಾಕಷ್ಟು ಶ್ರಮ ಬೇಕು. ಜನರು ಮುಂಜಾಗ್ರತೆ ವಹಿಸಿದರೆ ಹಲವು ಪ್ರಕರಣಗಳನ್ನು ತಪ್ಪಿಸಬಹುದು. ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು, ಅಲಾರಾಂಗಳನ್ನು ಬಳಸಬೇಕು. ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳು ಕಂಡಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಶೇ.80ಷ್ಟು ಅಪರಾಧ ತಡೆಯಬಹುದಾಗಿದೆ’ ಎಂದರು.
ಇದನ್ನೂ ಓದಿ – ಮೈಸೂರಿನಿಂದ ಐರಾವತ ಬಸ್ಸಲ್ಲಿ ಬಂದ ಇಂಜಿನಿಯರ್, ಶಿವಮೊಗ್ಗದಲ್ಲಿ ಇಳಿಯುವಾಗ ಕಾದಿತ್ತು ಶಾಕ್
ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಂ ಆಮಟೆ, ಡಿವೈಎಸ್ ಪಿಗಳು, ವಿವಿಧ ಠಾಣೆ ಇನ್ಸ್ ಪೆಕ್ಟರ್ ಗಳು, ಸಬ್ ಇನ್ಸ್ ಪೆಕ್ಟರ್ ಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422