ಶಿವಮೊಗ್ಗ: ಆಹಾರ ಪಾರ್ಕ್ (Food Park) ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಸರ್ಕಾರಿ ಜಮೀನಿನಲ್ಲಿ ಮಣ್ಣು ಕದಿಯುತ್ತಿದ್ದವರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೋಗಾನೆ ಗ್ರಾಮದಲ್ಲಿ ಆಹಾರ ಪಾರ್ಕ್ ನಿರ್ಮಾಣಕ್ಕೆ ಆಹಾರ ಕರ್ನಾಟಕ ನಿಯಮಿತಕ್ಕೆ ಸೇರಿದ ಸರ್ವೆ ಸಂಖ್ಯೆ 120 ರ ಸುಮಾರು 97 ಎಕರೆ ಜಮೀನು ಮೀಸಲಿಡಲಾಗಿದೆ. ಈ ಜಾಗದಲ್ಲಿ ಅಕ್ರಮವಾಗಿ ಮಣ್ಣು ತಗೆಯಲಾಗುತ್ತಿತ್ತು.

ಇದನ್ನೂ ಓದಿ : ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕೃತಿ ದಹನ
ಅಧಿಕಾರಿಗಳ ದಿಢೀರ್ ದಾಳಿ
ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಈ ವೇಳೆ ಸ್ಥಳದಲ್ಲಿ ಮಣ್ಣು ತುಂಬಿದ್ದ ಒಂದು ಜೆಸಿಬಿ, ಎರಡು ಟಿಪ್ಪರ್ ಲಾರಿ ಮತ್ತು ಎರಡು ಟ್ರಾಕ್ಟರ್‌ಗಳು ಕಂಡುಬಂದಿವೆ. ಅಧಿಕಾರಿಗಳ ವಾಹನವನ್ನು ದೂರದಿಂದಲೇ ಗಮನಿಸಿದ ಚಾಲಕರು ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಲೋಡ್ ಮಾಡಿದ್ದ ಟ್ರಾಕ್ಟರ್ ವಶಕ್ಕೆ
ದಾಳಿ ಸಂದರ್ಭ ಮಣ್ಣು ತುಂಬಿದ್ದ ಒಂದು ಟ್ರಾಕ್ಟರ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಾಜು 25 ಲೋಡ್ ಮಣ್ಣನ್ನು ಅಕ್ರಮವಾಗಿ ಕಳವು ಮಾಡಲಾಗಿದೆ. ಇದರ ಮೌಲ್ಯ ₹43,750 ಎಂದು ಅಂದಾಜಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



