ಶಿವಮೊಗ್ಗ: ಫೇಸ್ಬುಕ್ನಲ್ಲಿ ಪ್ರಕಟವಾದ ನಿವೃತ್ತ ನೌಕರರ ಕಾರ್ಡ್ ಎಂಬ ಜಾಹೀರಾತು ನಂಬಿ, ನಿವೃತ್ತ ನೌಕರರೊಬ್ಬರು ₹2.29 ಲಕ್ಷ ಹಣ ಕಳೆದುಕೊಂಡಿದ್ದಾರೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ನಿವೃತ್ತ ನೌಕರರೊಬ್ಬರು (ಹೆಸರು ಗೌಪ್ಯ) ಅಕ್ಟೋಬರ್ 12 ರಂದು ಫೇಸ್ಬುಕ್ ವೀಕ್ಷಿಸುತ್ತಿದ್ದಾಗ ಹಿರಿಯ ನಾಗರಿಕರ ನಿವೃತ್ತ ನೌಕರರ ಕಾರ್ಡ್ ಎಂಬ ಜಾಹೀರಾತು ಮತ್ತು ಲಿಂಕ್ ಕಾಣಿಸಿಕೊಂಡಿತ್ತು. ನಿವೃತ್ತಿಯ ಪೆನ್ಷನ್ ಕುರಿತು ಮಾಹಿತಿ ಪಡೆಯಲು ನಿವೃತ್ತ ನೌಕರ ಅದರಲ್ಲಿ ತಮ್ಮ ವಿವರ ನಮೂದಿಸಿದ್ದರು.

ಮರುದಿನ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನಿವೃತ್ತ ನೌಕರನಿಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ನಾನು ಕೆನರಾ ಬ್ಯಾಂಕ್ನಿಂದ ಮಾತನಾಡುತ್ತಿದ್ದೇನೆ, ನಿಮ್ಮ ಲೈಫ್ ಸರ್ಟಿಫಿಕೇಟ್ ಅಪ್ಡೇಟ್ ಮಾಡಬೇಕಾಗಿದೆ ಎಂದು ನಂಬಿಸಿದ್ದಾನೆ. ಅದನ್ನು ನಿಜ ಎಂದು ನಂಬಿದ ನಿವೃತ್ತ ನೌಕರ, ತಮ್ಮ ಕಸ್ಟಮರ್ ಐಡಿ, ಹೆಸರು, ಜನ್ಮ ದಿನಾಂಕ, ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಪಿನ್ ಸಂಖ್ಯೆಯ ವಿವರಗಳನ್ನು ಆತನಿಗೆ ಒದಗಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿವರಗಳನ್ನು ಪಡೆದ ತಕ್ಷಣ ವಂಚಕ ನಿವೃತ್ತ ನೌಕರನ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣ ದೋಚಿದ್ದಾನೆ. ಮೊದಲ ಖಾತೆಯಿಂದ ₹2,00,000 ಹಾಗೂ ₹10,000 ಹಾಗೂ ಎರಡನೇ ಖಾತೆಯಿಂದ ₹10,000 ಹಾಗೂ ₹9,000 ಸೇರಿ ಒಟ್ಟು ₹2,29,000 ನಗದು ಹಣವನ್ನು ಹಂತ ಹಂತವಾಗಿ ಕಡಿತಗೊಳಿಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಖಾತೆಯಿಂದ ಹಣ ಕಡಿತಗೊಂಡ ಮೆಸೇಜ್ ನೋಡಿ ಆಘಾತಗೊಂಡ ನಿವೃತ್ತ ನೌಕರ ಕೊನೆಗೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.