ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 12 JULY 2023
SHIMOGA : ದಿನೇ ದಿನೆ ಆನ್ಲೈನ್ ವಂಚಕರ (Online Fraud) ಹಾವಳಿ ಹೆಚ್ಚಾಗುತ್ತಿದೆ. ಅಜ್ಞಾತವಾಗಿ ಕುಳಿತು ನಾನಾ ಆಮಿಷಗಳನ್ನು ಒಡ್ಡಿ ಜನರನ್ನು ಬೆಲೆಗೆ ಕೆಡವಿಕೊಳ್ಳುತ್ತಿದ್ದಾರೆ. ಲಕ್ಷಾಂತರ ರೂ. ಲಪಟಾಯಿಸಿ ಸಂಪರ್ಕಕ್ಕೆ ಸಿಗದೆ ಮಯಾವಾಗುತ್ತಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ ನಡೆಯುತ್ತಿರುವ ಮೂರು ಪ್ರಮುಖ ಆನ್ಲೈನ್ ವಂಚನೆಗಳ ಪಟ್ಟಿ ಇಲ್ಲಿದೆ. ಈ ಬಗ್ಗೆ ಜನರು ಎಚ್ಚರ ವಹಿಸಬೇಕಿದೆ.
ಇದನ್ನೂ ಓದಿ – ಗೃಹಿಣಿಯರೆ ಹುಷಾರ್, ನಿಮಗೂ ಬರಬಹುದು ‘ವಿಕ್ಕಿ’ಯ ಮೆಸೇಜ್, ಸಂಕಷ್ಟಕ್ಕೆ ಸಿಲುಕಿದ ಶಿವಮೊಗ್ಗದ ಮಹಿಳೆ
ಯಾವೆಲ್ಲ ವಂಚನೆಗಳಾಗುತ್ತಿವೆ?
ಆನ್ಲೈನ್ ವಂಚನೆ 1 : ಡಾಕ್ಟರ್, ಫಾರಿನ್ ಮತ್ತು ಗಿಫ್ಟ್
ವಿದೇಶದಲ್ಲಿ ನೆಲೆಸಿರುವ ವೈದ್ಯನಂತೆ ನಟಿಸಿ ಫೇಸ್ಬುಕ್ನಲ್ಲಿ ಮಹಿಳೆಯರಿಗಷ್ಟೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಕೆಲದಿನ ಚಾಟಿಂಗ್ ನಡೆಸಲಾಗುತ್ತದೆ. ಮಹಿಳೆಯರು ಬಲೆಗೆ ಬೀಳಬಹುದು ಎಂಬುದು ಅರಿತು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಅಮೆರಿಕದ ಡಾಲರ್ಗಳ ಫೋಟೊ ಕಳುಹಿಸಲಾಗುತ್ತದೆ. ‘ಇದನ್ನೆಲ್ಲ ನಿಮಗೆ ಗಿಫ್ಟ್ ಕೊಡುತ್ತೇನೆ’ ಎಂದು ಬಿಂಬಿಸಿ, ಮಹಿಳೆಯರ ವಿಳಾಸ ಪಡೆಯುತ್ತಾರೆ. ಒಂದೆರಡು ದಿನದ ಬಳಿಕ ವಿಮಾನ ನಿಲ್ದಾಣದ ಕಸ್ಟಮ್ಸ್ ಆಫೀಸರ್ ನೆಪದಲ್ಲಿ ಒಬ್ಬಾತ ಕರೆ ಮಾಡಿ, ನಿಮ್ಮ ಗಿಫ್ಟ್ಗೆ ಟ್ಯಾಕ್ಸ್ ಕಟ್ಟಿ ಅನ್ನುತ್ತಾನೆ. ಆಮೇಲೆ ನಾನಾ ನೆಪ ಹೇಳಿ ಲಕ್ಷಾಂತರ ರೂ. ಆನ್ಲೈನ್ ಮೂಲಕವೆ ವರ್ಗಾಯಿಸಿಕೊಂಡು ವಂಚಿಸಲಾಗುತ್ತಿದೆ.
‘ಮಗುವಿಗೆ ಹುಷಾರಿಲ್ಲ ಯಾರಾದರು ನೆರವು ನೀಡಿʼ ಎಂದು ಶಿವಮೊಗ್ಗದ ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಅಮೆರಿಕದ ಡಾಕ್ಟರ್ ನಾನು ಅಂತಾ ಫೇಸ್ಬುಕ್ನಲ್ಲಿ ರಿಕ್ವೆಸ್ಟ್ ಕಳುಹಿಸಿ, ಮಗುವಿಗೆ ಚಿಕಿತ್ಸೆ ಮಾಡುತ್ತೇನೆ ಎಂದು ನಂಬಿಸಿ ಮಹಿಳೆಯಿಂದ ಸುಮಾರು ಒಂದು ಲಕ್ಷ ರೂ. ಹಣ ಪಡೆದು ವಂಚಿಸಿದ್ದಾನೆ. ಮರ್ಯಾದೆಗೆ ಅಂಜಿ ಮಹಿಳೆ ದೂರು ನೀಡಲು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ವಿದ್ಯಾರ್ಥಿನಿ ಇನ್ಸ್ಟಾಗ್ರಾಂ ಖಾತೆಗೆ ಬಂತು ಎರಡು ಫ್ರೆಂಡ್ ರಿಕ್ವೆಸ್ಟ್, ಪರಿಶೀಲಿಸಿದಾಗ ಕಾದಿತ್ತು ಶಾಕ್
ಆನ್ಲೈನ್ ವಂಚನೆ 2 : ಮನೆಯಿಂದಲೆ ಕೆಲಸ
WORK FROM HOME ಎಂದು ಗೂಗಲ್ನಲ್ಲಿ ಸರ್ಚ್ ಮಾಡುವವರನ್ನೆ ಗುರಿಯಾಗಿಸಿಕೊಂಡು ವಂಚಿಸುವ ಜಾಲವು ಇದೆ. ಟೆಲಿಗ್ರಾಂ ಆಪ್ ಮೂಲಕ ಮೆಸೇಜ್ ಕಳುಹಿಸಿ, ಮನೆಯಿಂದಲೆ ಕೆಲಸ ಮಾಡಿ ಪ್ರತಿದಿನ ಸಾವಿರಾರು ರುಪಾಯಿ ಗಳಿಸಬಹುದು ಎಂದು ಆಮಿಷ ಒಡ್ಡಲಾಗುತ್ತದೆ. ಹಣ ಕಟ್ಟಿ ಒಂದೊಂದೆ ಟಾಸ್ಕ್ ಪೂರೈಸಿದರೆ ಕಮಿಷನ್ ರೂಪದಲ್ಲಿ ದುಪ್ಪಟ್ಟು ಗಳಿಸಬಹುದು ಎಂದು ನಂಬಿಸಲಾಗುತ್ತದೆ. ಮೊದಲಿಗೆ ಕಡಿಮೆ ಮೊತ್ತವನ್ನು ಆನ್ಲೈನ್ ಮೂಲಕ ಕಟ್ಟಿಸಿಕೊಳ್ಳಲಾಗುತ್ತದೆ. ಸುಲಭದ ಟಾಸ್ಕ್ ನೀಡಲಾಗುತ್ತದೆ. ಅದು ಮುಗಿಯುತ್ತಿದ್ದಂತೆ ಕಮಿಷನ್ ರೂಪದಲ್ಲಿ ದುಪ್ಪಟ್ಟು ಹಣ ಬ್ಯಾಂಕ್ ಖಾತೆಗೆ ಬರಲಿದೆ.
ಇದನ್ನೂ ಓದಿ – ಮಹಿಳೆಯರೆ ಹುಷಾರ್, WORK FROM HOME ಹೆಸರಲ್ಲಿ ನಡೆಯುತ್ತಿದೆ ವಂಚನೆ, ಶಿವಮೊಗ್ಗದಲ್ಲಿ ಕೇಸ್
ಮತ್ತಷ್ಟು ಟಾಸ್ಕ್ನ ಆಮಿಷವೊಡ್ಡಿ ಹಂತ ಹಂತವಾಗಿ ದೊಡ್ಡ ಮೊತ್ತ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಟಾಸ್ಕ್ ಮುಗಿದರು ಕಮಿಷನ್ ಹಣ ಬ್ಯಾಂಕ್ ಖಾತೆಗೆ ಬರುವುದಿಲ್ಲ. ವಂಚನೆಗೊಳಗಾಗಿರುವ ಅರಿವಾಗುವಷ್ಟರಲ್ಲಿ ಲಕ್ಷಾಂತರ ರೂ. ವಂಚಕರ ಖಾತೆ ಸೇರಿರುತ್ತದೆ.
ಆನ್ಲೈನ್ ವಂಚನೆ 3 : ಏರ್ಪೋರ್ಟ್ನಲ್ಲಿ ಕೆಲಸ
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಆನ್ಲೈನ್ ವಂಚಕರು ಸಕ್ರಿಯವಾದರು. ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವು ಯುವಕರಿಗೆ ವಂಚಿಸಲಾಗಿದೆ. ಈ ವಂಚನೆ ಇನ್ನೂ ಮುಂದುವರೆದಿದೆ. ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್, ಮ್ಯಾನೇಜರ್ ಸೇರಿದಂತೆ ಇಲ್ಲಸಲ್ಲದ ಹುದ್ದೆಗಳನ್ನೆಲ್ಲ ಸೃಷ್ಟಿಸಿ ಆನ್ಲೈನ್ ಮೂಲಕ ಹರಿಬಿಡಲಾಗಿದೆ. ಇದನ್ನು ನಂಬಿ ಹಲವು ಯುವಕರು ಆ ಪೋಸ್ಟರ್ನಲ್ಲಿರುವ ಅಥವಾ ನಕಲಿ ವೆಬ್ಲಿಂಕ್ಗಳಲ್ಲಿರುವ ಮೊಬೈಲ್ ನಂಬರ್ಗೆ ಕರೆ ಮಾಡುತ್ತಿದ್ದಾರೆ.
ಕರೆ ಮಾಡುವ ಪ್ರತಿಯೊಬ್ಬರಿಗು ವಂಚಕರು ಸಂದರ್ಶನ ಮಾಡುತ್ತಿದ್ದಾರೆ. ಕೊನೆಗೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ಆಫರ್ ಲೆಟರ್ ಕೂಡ ಕಳುಹಿಸುತ್ತಿದ್ದಾರೆ. ಅಷ್ಟೆ ಅಲ್ಲದೆ, ಯುನಿಫಾರಂ ಫೀಸ್, ಆಪಾಯಿಂಟ್ಮೆಂಟ್ ಆರ್ಡರ್ ಫೀಸ್ ಸೇರಿದಂತೆ ನಾನಾ ಫೀಸ್ ಎಂದು ಸಾವಿರಾರು ರುಪಾಯಿ ಹಣವನ್ನು ಆನ್ಲೈನ್ ಮೂಲಕ ಕಟ್ಟಿಸಿಕೊಳ್ಳುತ್ತಿದ್ದಾರೆ. ಕೊನೆಗೆ, ‘ನಾಳೆ ಏರ್ಪೋರ್ಟ್ ಬಳಿ ಬನ್ನಿ, ಕೆಲಸಕ್ಕೆ ಸೇರಿಕೊಳ್ಳಿʼ ಎಂದು ತಿಳಿಸುತ್ತಾರೆ. ಇದನ್ನು ನಂಬಿ ವಿಮಾನ ನಿಲ್ದಾಣದ ಗೇಟ್ ಬಳಿ ಬರುವ ಯುವಕರಿಗೆ ಭದ್ರತಾ ಸಿಬ್ಬಂದಿ ಇರುವ ಸತ್ಯವನ್ನು ತಿಳಿಸಿ ವಾಪಸ್ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸದ ವಿಚಾರ, ಪೋಸ್ಟ್ ವೈರಲ್ ಬೆನ್ನಿಗೆ ಪೊಲೀಸರು ಅಲರ್ಟ್
ವಂಚಕರಿದ್ದಾರೆ ಹುಷಾರ್..!
ಆನ್ಲೈನ್ ಮೂಲಕ ನಾನಾ ಬಗೆಯಲ್ಲಿ ಜನರನ್ನ ವಂಚಿಸಲಾಗುತ್ತಿದೆ. ಈ ಬಗ್ಗೆ ಜನರು ಜಾಗೃತವಾಗಿದ್ದರೆ ವಂಚಕರ ಜಾಲಕ್ಕೆ ಬೀಳುವುದರಿಂದ ತಪ್ಪಿಸಿಕೊಳ್ಳಬಹುದು. ಯಾವುದೆ ಆಮಿಷಕ್ಕೆ ಬಲಿಯಾಗದೆ, ಅನಾಮಿಕರ ಜೊತೆಗೆ ಆನ್ಲೈನ್ ಮೂಲಕ ಹಣಕಾಸು ವ್ಯವಹಾರ ನಡೆಸದೆ ಇದ್ದರೆ ಲಕ್ಷಾಂತರ ರೂ. ಕಳೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಕೆಲಸ ಕೊಡುವವರು ಎಂದಿಗೂ ಹಣ ಪಡೆದು ಕೆಲಸ ಕೊಡುವುದಿಲ್ಲ ಎಂಬುದನ್ನು ಅರಿತರೆ ವಂಚಕರಿಂದ ಪಾರಾಗಬಹುದು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಕೆಲಸದ ಹೆಸರಲ್ಲಿ ಮಹಾ ಮೋಸ, ದಾಖಲಾಯಿತು ಮೊದಲ ಕೇಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422