ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 MARCH 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಯು ಟ್ಯೂಬ್ನಲ್ಲಿ ಪ್ರಸಾರವಾದ ಜ್ಯೋತಿಷ್ಯದ ಜಾಹೀರಾತು ನಂಬಿ ಶಿವಮೊಗ್ಗದ ಮಹಿಳೆಯೊಬ್ಬರು 9.44 ಲಕ್ಷ ರೂ. ಮೋಸ ಹೋಗಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯು ಟ್ಯೂಬ್ ಜಾಹೀರಾತಿನಲ್ಲಿ ಕಾಣಿಸಿದ ಮೊಬೈಲ್ ನಂಬರ್ಗೆ ಕರೆ ಮಾಡಿ ಹಣ ಕಳೆದುಕೊಂಡಿದ್ದಾರೆ.
ವಂಚನೆ ಆಗಿದ್ದು ಹೇಗೆ?
ಶಿವಮೊಗ್ಗದ ಮಹಿಳೆಯೊಬ್ಬರು (ಹೆಸರು, ಸ್ಥಳ ಗೌಪ್ಯ) ಯು ಟ್ಯೂಬ್ನಲ್ಲಿ ಜ್ಯೋತಿಷ್ಯದ ಜಾಹೀರಾತು ಗಮನಿಸಿ, ಅದರಲ್ಲಿರುವ ಮೊಬೈಲ್ ನಂಬರ್ಗೆ ಕರೆ ಮಾಡಿದ್ದರು. ಜ್ಯೋತಿಷಿ ಬಳಿ ಫೋನ್ನಲ್ಲಿ ಸಮಸ್ಯೆ ಹೇಳಿಕೊಂಡಿದ್ದರು. ಸಮಸ್ಯೆ ಪರಿಹಾರಕ್ಕೆ ಪೂಜೆ ಮಾಡಿಸಲು 251 ರೂ. ಗೂಗಲ್ ಪೇ ಮಾಡುವಂತೆ ಆತ ತಿಳಿಸಿದ್ದ. ನಂಬಿದ ಮಹಿಳೆ ಹಣ ಕಳುಹಿಸಿದ್ದರು. ಆ ಬಳಿಕ ನಾನಾ ಕಾರಣಗಳನ್ನು ಹೇಳಿ ಆತ ಒಟ್ಟು 6.37 ಲಕ್ಷ ರೂ. ಹಣ ಪಡೆದಿದ್ದ. ಆ ನಂತರ ಕರೆ ಮಾಡಿದಾಗ ‘ತನಗೆ ಅಪಘಾತವಾಗಿ ಕೋಮಾಗೆ ಹೋಗಿದ್ದೆ. ಈಗ ದೇವಸ್ಥಾನದ ಆಡಳಿತವನ್ನು ಮತ್ತೊಬ್ಬರಿಗೆ ವಹಿಸಲಾಗಿದೆ. ಅವರು ತಮ್ಮ ಹಣ ಹಿಂತಿರುಗಿಸಲಿದ್ದಾರೆʼ ಎಂದು ಆತ ತಿಳಿಸಿದ್ದ.
ಮತ್ತೊಮ್ಮೆ ಲಕ್ಷ ಲಕ್ಷ ಪಡೆದರು
ಜ್ಯೋತಿಷಿ ನೀಡಿದ್ದ ಮತ್ತೊಂದು ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಆತ, ತಮ್ಮ ಹಣ ಹಿಂತಿರುಗಿಸಲು ಸ್ವಲ್ಪ ಖರ್ಚಾಗಲಿದೆ ಎಂದು ಮಹಿಳೆಗೆ ತಿಳಿಸಿದ್ದ. ನಂಬಿದ ಮಹಿಳೆ ಹಂತ ಹಂತವಾಗಿ 3.07 ಲಕ್ಷ ರೂ. ಹಣ ವರ್ಗಾಯಿಸಿದ್ದರು. ಆದರೆ ತಮ್ಮ ಹಣ ಹಿಂತಿರುಗದೆ ಇದ್ದಾಗ ವಂಚನೆಗೊಳಗಾಗಿರುವುದು ಅರಿವಾಗಿದೆ. ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತರ ಜೊತೆ ವ್ಯವಹಾರ ಬೇಡ
ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿಷ್ಯ, ಉದ್ಯೋಗ ಸೇರಿದಂತೆ ವಿವಿಧ ಬಗೆಯ ಜಾಹೀರಾತುಗಳನ್ನು ಪ್ರಕಟಿಸಿ ವಂಚಕರು ಅಮಾಯಕರನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದಾರೆ. ಲಕ್ಷಾಂತರ ರೂ. ವಂಚಿಸುತ್ತಿದ್ದಾರೆ. ಅಪರಿಚಿತರ ಜೊತೆಗೆ ಹಣಕಾಸು ವ್ಯವಹಾರ ನಡೆಸುವಾಗ ಎಚ್ಚರ ವಹಿಸಬೇಕಿದೆ. ಇಲ್ಲವಾದಲ್ಲಿ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.
ಇದನ್ನೂ ಓದಿ – ಬೆಂಗಳೂರು ಬಾಂಬ್ ಸ್ಪೋಟ ಕೇಸ್, ತೀರ್ಥಹಳ್ಳಿಯಲ್ಲಿ ದಾಳಿ