ಶಿವಮೊಗ್ಗ: ಜಮೀನು ವಿವಾದ ಸಂಬಂಧ ವ್ಯಕ್ತಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳಿಗೆ ಶಿವಮೊಗ್ಗದ ನ್ಯಾಯಾಲಯವು ಜೀವಾವಧಿ ಶಿಕ್ಷೆ (life imprisonment) ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದ ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಹಾಗೂ ಆರೋಪಿಗಳಾದ ಕುಮಾರ್ (57) ಮತ್ತು ಕಾರ್ತಿಕ್ (28) ಎಂಬುವವರ ಮಧ್ಯೆ ಜಮೀನಿನ ವಿಚಾರದಲ್ಲಿ ಗಲಾಟೆ ಇತ್ತು. ಇದೇ ದ್ವೇಷದಿಂದ 2023ರ ಡಿಸೆಂಬರ್ 3ರಂದು ಆರೋಪಿಗಳು ಮಹೇಶಪ್ಪನನ್ನು ಕೊಲೆ ಮಾಡುವ ಉದ್ದೇಶದಿಂದ ಮತ್ತೋಡು ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿದ್ದರು. ಮಹೇಶಪ್ಪ ಅವರು ಸ್ಕೂಟಿಯಲ್ಲಿ ಬರುತ್ತಿದ್ದಾಗ ತಡೆದು, ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.

ಇದನ್ನೂ ಓದಿ – ಶಿವಮೊಗ್ಗ ಡಿ.ಸಿ ಕಚೇರಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?
ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ವೈ. ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು.

ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿಗಳ ಮೇಲಿನ ಸಾಕ್ಷ್ಯಾಧಾರಗಳು ದೃಢಪಟ್ಟಿವೆ. ಈ ಹಿನ್ನೆಲೆ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗಳಾದ ಕುಮಾರ್ ಮತ್ತು ಕಾರ್ತಿಕ್ ಇಬ್ಬರಿಗೂ ಜೀವಾವಧಿ ಕಠಿಣ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ. ₹57,000 ದಂಡ ವಿಧಿಸಿ ಆದೇಶಿಸಲಾಗಿದೆ.








