SHIVAMOGGA LIVE | 5 AUGUST 2023
SHIMOGA : ವಿಐಎಸ್ಎಲ್ ಕಾರ್ಖಾನೆಯ (VISL) ಎಲ್ಲ ವಿಭಾಗಗಳನ್ನು ಶಾಶ್ವತವಾಗಿ ಪುನಾರಂಭ ಮಾಡಿದರೆ ಮಾತ್ರ ಅನುಕೂಲವಾಗಲಿದೆ. ಈಗಿನ ಬೆಳವಣಿಗೆ ಚುನಾವಣೆ ಗಿಮಿಕ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ ವಿಐಎಸ್ಎಲ್ ಬಂದ್ ಮಾಡುವುದಿಲ್ಲ ಎಂದಿದ್ದರು. ಆದರೆ ಈ ಹಿಂದೆ ಒಂದೆರಡು ಬಾರಿ ಇಲ್ಲಿಯ ಕೆಲವು ಜನಪ್ರತಿನಿಧಿಗಳು, ಸಂಸದರು ಕಾರ್ಖಾನೆ ಬಂದ್ ಆಗಲಿದೆ ಎಂದು ಹೇಳಿಕೆ ನೀಡಿದ್ದರು. ಈಗ ಏಳೆಂಟು ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ. ಆದ್ದರಿಂದ ವಿಐಎಸ್ಎಲ್ಗೆ ತಾತ್ಕಾಲಿಕವಾಗಿ ಹೂಡಿಕೆ ಮಾಡಿದ್ದಾರೆ. ಶಶ್ವಾತ ಹೂಡಿಕೆ ಪ್ರಕಟಿಸಿದರೆ ಮಾತ್ರ ನಂಬಿಕೆ ಬರಲಿದೆ. ಇಲ್ಲವಾದಲ್ಲಿ ಬಿಜೆಪಿಯವರನ್ನು ನಂಬಲು ಆಗುವುದಿಲ್ಲ ಎಂದರು.
ಇದನ್ನೂ ಓದಿ – ನಮ್ಮೂರ ಹಮ್ಮೆ, ಪ್ರತಿಭಾವನ್ವಿತರಿಗೆ ಸಚಿವರಿಂದ ಗೌರವ, ಬಲಿಷ್ಠ ಭಾರತ ನಿರ್ಮಾಣಕ್ಕೆ ಒಂದಾಗುವಂತೆ ಮನವಿ
ವಿಐಎಸ್ಎಲ್ ಮತ್ತು ಎಂಪಿಎಂ ಈ ಜಿಲ್ಲೆಯ ಕಿರೀಟ. ಅದನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ರೆ ಇಷ್ಟರೊಳಗೆ ಅನುಕೂಲವಾಗುತ್ತಿತ್ತು. ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ವಿಐಎಸ್ಎಲ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.