ಶಿವಮೊಗ್ಗ: ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಆಗಸ್ಟ್ 13 ಮತ್ತು 14 ರಂದು ಬೆಳಿಗ್ಗೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಶಿವಮೊಗ್ಗದ ಕೋಟೆ ರಸ್ತೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಅರ್ಹತೆ, ಮಾನದಂಡಗಳೇನು?
- ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.
- ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಮತ್ತು ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಆದ್ಯತೆ ನೀಡಲಾಗುತ್ತದೆ. ಸಂವಹನ ಕೌಶಲ್ಯ ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿದವರಿಗೆ ವಿಶೇಷ ಆದ್ಯತೆ ಇರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ₹5,000 ಮೌಲ್ಯದ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿ ಇಡಬೇಕು. ಆಯ್ಕೆಯಾದವರಿಗೆ ಅವರು ಮಾಡುವ ವ್ಯವಹಾರದ ಆಧಾರದ ಮೇಲೆ ಇಲಾಖೆಯ ನಿಯಮಾನುಸಾರ ಪ್ರೋತ್ಸಾಹಧನ ನೀಡಲಾಗುತ್ತದೆ. ಟಿಎ/ಡಿಎ ಹಾಗೂ ಸಂದರ್ಶನಕ್ಕೆ ಬರುವವರಿಗೂ ಯಾವುದೇ ಭತ್ಯೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ, ಸ್ವವಿವರ ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳ ನಕಲುಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿಗಳ ಮೊಬೈಲ್ ಸಂಖ್ಯೆ 9036842084 ಅನ್ನು ಸಂಪರ್ಕಿಸಬಹುದು ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.