ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಡಿಸೆಂಬರ್ 2021
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನೆರವೇರಿಸಲು ಡಿಸೆಂಬರ್ 7ರ ಸಂಜೆ 4 ಗಂಟೆಯಿಂದ ಡಿಸೆಂಬರ್ 10ರ ಸಂಜೆ 4 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಅವಧಿಯಲ್ಲಿ ಕಾನೂನು ಬಾಹಿರ ಗುಂಪುಗಾರಿಕೆ ಮತ್ತು ಸಾರ್ವಜನಿಕ ಸಭೆಯನ್ನು ನಡೆಸುವುದನ್ನು ಪ್ರತಿಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತಗಟ್ಟೆ ಬಳಿ ಗುಂಪು ಸೇರುವಂತಿಲ್ಲ
ಮತಗಟ್ಟೆ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ನಡೆಸುವುದು, ನಿಷೇಧಿತ 100 ಮೀ ವ್ಯಾಪ್ತಿಯಲ್ಲಿ ಮತದಾರರು ಮತ್ತು ಸಾರ್ವಜನಿಕರು ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.
ಈ ನಿಷೇಧಿತ ಪ್ರದೇಶಗಳಲ್ಲಿ ಮತದಾನಕ್ಕೆ ಬಾದಕವಾಗುವಂತಹ ಯಾವುದೇ ಕೃತ್ಯ, ಚಟುವಟಿಕೆ ನಿಷೇಧಿಸಿದೆ. ಮತಗಟ್ಟೆ ಕೇಂದ್ರಗಳ 100 ಮೀ ವ್ಯಾಪ್ತಿಯಲ್ಲಿ ಮೊಬೈಲ್ ಮತ್ತು ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ.
ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಜಿ, ಚೂರಿ, ದೊಣ್ಣೆ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ನಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ಸ್ಫೋಟಕ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಮತದಾನ ನಡೆಯುವ ಪ್ರದೇಶದಲ್ಲಿ 5 ಜನರಿಗಿಂತ ಹೆಚ್ಚಿನ ವ್ಯಕ್ತಿಗಳು ಗುಂಪುಗೂಡುವುದು, ಒಟ್ಟಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ. ಆದರೆ ಮತಯಾಚಿಸುವ ಸಲುವಾಗಿ ಮನೆಯಿಂದ ಮನೆಗೆ ಬೇಟಿ ನೀಡುವುದಕ್ಕೆ ನಿರ್ಬಂಧ ಇರುವುದಿಲ್ಲ. ಮತದಾನ ಕೇಂದ್ರದ ಪರಿಮಿತಿ 1 ಕಿ.ಮೀ. ವ್ಯಾಪ್ತಿಯಲ್ಲಿ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಭಾರಿ ಪ್ರಮಾಣದಲ್ಲಿ ಜನ ಗುಂಪುಗೂಡುವುದು ಮತ್ತು ಸಂಚರಿಸುವುದನ್ನು ನಿಷೇಧಿಸಿದೆ. ಈ ನಿಷೇದಾಜ್ಞೆ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ.
ಯಾವುದಕ್ಕೆಲ್ಲ ನಿಷೇಧಾಜ್ಞೆ ಅನ್ವಯವಾಗಲ್ಲ
ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸುವುದು, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿನ ಪ್ರಾರ್ಥನೆಗೆ ತೆರಳುವವರಿಗೆ ಹಾಗೂ ಇನ್ನಿತರ ಸಮಾರಂಭಗಳನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ತುರ್ತು ಕಾರ್ಯಾಚರಣೆ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಕೋವಿಡ್-19 ನಿರ್ವಹಣೆಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ. ಆದೇಶದಲ್ಲಿ ಸೂಚಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422