ಕುವೆಂಪು ವಿವಿ: 5 ತಿಂಗಳಿಂದ ಫಲಿತಾಂಶವಿಲ್ಲ, 3 ವರ್ಷದಿಂದ ಅಂಕಪಟ್ಟಿ ಸಿಕ್ಕಿಲ್ಲ, ರೊಚ್ಚಿಗೆದ್ದ ವಿದ್ಯಾರ್ಥಿಗಳು

Published On : ಏಪ್ರಿಲ್ 23, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ (Kuvempu University) ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಎನ್‌ಎಸ್‌ಯುಐ ಸಂಘಟನೆ ವತಿಯಿಂದ ಕುಲಪತಿಗೆ ಮುತ್ತಿಗೆ ಹಾಕಲಾಯಿತು. ತಕ್ಷಣ ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಲಾಯಿತು.

ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಚೇರಿ ಮುಂಭಾಗ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾಲಯದ ಆಂತರಿಕ ಕಚ್ಚಾಟದಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

NSUI ಆರೋಪಗಳೇನು?

ಫಲಿತಾಂಶ ವಿಳಂಬ: ಪರೀಕ್ಷೆ ಮುಗಿದು 5 ತಿಂಗಳಾದರೂ 1, 3 ಮತ್ತು 5ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿಲ್ಲ. ಮೌಲ್ಯಮಾಪಕರಿಗೆ ಗೌರವಧನ ನೀಡದ ಕಾರಣ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿದ್ದಾರೆ.

NSUI-workers-with-students-protest-in-front-of-Kuvempu-University

ಅಂಕಪಟ್ಟಿ ವಿತರಣೆ ಸ್ಥಗಿತ: ಕಳೆದ 3 ವರ್ಷಗಳಿಂದ ಯಾವುದೇ ಪದವಿ ಅಂಕಪಟ್ಟಿಗಳನ್ನು ವಿತರಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಉದ್ಯೋಗ ಮತ್ತು ಮುಂದಿನ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.

ಶುಲ್ಕದ ಸುಲಿಗೆ: ಪರೀಕ್ಷಾ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.

ಘಟಿಕೋತ್ಸವ ಸ್ಥಗಿತ: ಕಳೆದ ಎರಡು ವರ್ಷಗಳಿಂದ ಘಟಿಕೋತ್ಸವ ನಡೆಸದ ಕಾರಣ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳು ಲಭ್ಯವಾಗುತ್ತಿಲ್ಲ. ಅಲ್ಲದೆ, UUCMS ತಾಂತ್ರಿಕ ದೋಷಗಳಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಪ್ರಮುಖ ಬೇಡಿಕೆಗಳು: ಕೂಡಲೇ ಬಾಕಿ ಇರುವ ಫಲಿತಾಂಶ ಪ್ರಕಟಿಸಬೇಕು. ಹೆಚ್ಚುವರಿ ಶುಲ್ಕ ಇಳಿಸಬೇಕು. ಡಿಜಿಟಲ್ ಮೌಲ್ಯಮಾಪನ ಕೈಬಿಡಬೇಕು ಮತ್ತು ವಿವಿಯಲ್ಲಿನ ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಎನ್‌ಎಸ್‌ಯುಐ ಕಾರ್ಯಕರ್ತರು ಒತ್ತಾಯಿಸಿದರು.

NSUI-workers-with-students-protest-in-front-of-Kuvempu-University

ಕುಲಪತಿಗೆ ಮುತ್ತಿಗೆ, ರಾಜ್ಯಪಾಲರಿಗೆ ದೂರು

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಕುಲಪತಿ ಡಾ. ಶರತ್‌ ಅನಂತಮೂರ್ತಿ ಅವರನ್ನು ಎನ್‌ಎಸ್‌ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿದರು. ತಮ್ಮ ಅಧಿಯಲ್ಲಿ ವಿವಿಯಲ್ಲಿ ಆಂತರಿಕ ಕಚ್ಚಾಟದಿಂದಾಗಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಕುವೆಂಪು ವಿವಿಯಲ್ಲಿನ ಸಮಸ್ಯೆಗಳ ಕುರಿತು ಎನ್‌ಎಸ್‌ಯುಐ ಕಾರ್ಯಕರ್ತರು ರಾಜ್ಯಪಾಲರಿಗೆ ದೂರು ನೀಡಿದೆ.

ಪ್ರತಿಭಟನೆಯಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷ ರವಿ, ಪ್ರಮುಖರಾದ ಮಧುಸೂದನ್‌ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 23, 2026

Leave a Comment