ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SUICIDE| 12 ಏಪ್ರಿಲ್ 2022
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ತಮ್ಮ ಆಪ್ತರಿಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ.
ಉಡುಪಿ KSRTC ಬಸ್ ನಿಲ್ದಾಣ ಸಮೀಪದ ಶಾಂಭವಿ ಲಾಡ್ಜ್’ನಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ಲೊಕೇಷನ್ ಆಧಾರದ ಮೇಲೆ ಲಾಡ್ಜ್’ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಬಯಲಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ವಾಟ್ಸಪ್ ಮೆಸೇಜ್ ಕಳುಹಿಸಿದ್ದರು
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮೊದಲು ಮಾಧ್ಯಮ ಪ್ರತಿನಿಧಿಗಳು ಮತ್ತು ತಮ್ಮ ಆಪ್ತರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. ಇದು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ವಾಟ್ಸಪ್ ಸಂದೇಶ ಕಳುಹಿಸಿದ್ದ ಬಳಿಕ ಸಂತೋಷ್ ಪಾಟೀಲ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ತಮ್ಮ ವಾಟ್ಸಪ್ ಸಂದೇಶದಲ್ಲಿ ತಮ್ಮ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಬರೆದಿದ್ದರು ಎನ್ನಲಾಗಿದೆ.
‘ತಕ್ಷಣ ಈಶ್ವರಪ್ಪ ಬಂಧಿಸಿ’
ಈ ಹಿಂದೆ ಪೊಲೀಸ್ ಅಧಿಕಾರಿ ಗಣಪತಿ ಅವರು ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಿದ್ದರು. ಈಗ ಸಂತೋಷ್ ಪಾಟೀಲ್ ಅವರು ನೇರವಾಗಿ ಆರೋಪ ಮಾಡಿದ್ದಾರೆ. ಸರ್ಕಾರ ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ತಕ್ಷಣ ಈಶ್ವರಪ್ಪ ಅವರನ್ನು ಕ್ಯಾಬಿನೆಟ್’ನಿಂದ ಕೈ ಬಿಡಬೇಕು ಮತ್ತು ಅವರನ್ನು ಕೂಡಲೆ ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
‘ಸಂಪುಟದಿಂದ ಕೂಡಲೆ ಕೈ ಬಿಡಬೇಕು’
ಲಂಚದ ಆರೋಪ ಮಾಡಿದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಯಾರು ಕಾರಣ ಅನ್ನುವುದನ್ನು ಬರೆದಿಟ್ಟು ಹೋಗಿದ್ದಾರೆ. ಎಲ್ಲರಿಗೂ ಯಾವ ರೀತಿ ಕಾನೂನು ಬಳಕೆ ಮಾಡುತ್ತಿದ್ದರೋ ಅದೆ ರೀತಿ ಈಶ್ವರಪ್ಪ ವಿರುದ್ಧ ಕಾನೂನು ಬಳಕೆ ಮಾಡಬೇಕು. ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿ, ಬಂಧಿಸಬೇಕು. 40 ಪರ್ಸೆಂಟ್ ಕಮಿಷನ್ ವಿಚಾರ ದೇಶದಲ್ಲೆ ಗಂಭೀರ ಅಪಾದನೆ. ಕೂಡಲೆ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಸಚಿವ ಈಶ್ವರಪ್ಪ ಮೊದಲ ಪ್ರತಿಕ್ರಿಯೆ
ಈ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅವರು ಮೈಸೂರನಲ್ಲಿ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ. ‘ಸಂತೋಷ್ ಪಾಟೀಲ್ ಯಾರು ಅನ್ನುವುದೆ ನನಗೆ ಗೊತ್ತಿಲ್ಲ. ಅವರು ದೆಹಲಿಯಲ್ಲಿ ಮಾತುಕತೆ ಮಾಡಿರುವುದನ್ನು ನಾನು ನೋಡಿದೆ. ಈಶ್ವರಪ್ಪ ಕಡೆಯವರು 40% ಕಮಿಷನ್ ಕೇಳಿದಾರೆ ಅಂತಾ ಹೇಳಿದರು. ಇದನ್ನು ಮೋದಿಯವರು, ಅಮಿತ್ ಷಾ ಅವರಿಗೆ ತಿಳಿಸುತ್ತಿದ್ದೇನೆ ಎಂದು ಹೇಳಿದ್ದರು. ಆ ಕಾಪಿ ಸಿಕ್ಕ ಬಳಿಕ ನಾನು ಕೇಸ್ ದಾಖಲಿಸಿದೆ.’ ಎಂದರು.
‘ಈಗ ಸಂತೋಷ್ ಪಾಟೀಲ್ ಅವರಿಗೆ ನೊಟೀಸ್ ಹೋಗಿದೆ. ಈ ಮಧ್ಯೆ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿಯವರು 40% ಕಮಿಷನ್ ಕುರಿತು ಆರೋಪ ಮಾಡಿ ದೆಹಲಿಯಲ್ಲಿ ಸುದ್ದಿಗೋಷ್ಟಿ ಮಾಡಿದ್ದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಈ ಕುರಿತು ಸ್ಪಷ್ಟನೆ ಕೇಳಿದ್ದರು. ಅವರು ನನ್ನ ಮೇಲೆ ಆರೋಪ ಮಾಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇನೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಮಾಧ್ಯಮಗಳಿಂದ ಗೊತ್ತಾಗಿದೆ. ಅವರು ಡೆತ್ ನೋಟ್’ನಲ್ಲಿ ಏನು ಬರೆದಿದ್ದಾರೋ ನನಗೆ ಗೊತ್ತಿಲ್ಲ’ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ | ಸಚಿವ ಈಶ್ವರಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ ವಿರುದ್ಧ ಕೇಸ್ ದಾಖಲು
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422