ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020
ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ನಿಗದಿತ ಅವಧಿಯ ಒಳಗಾಗಿ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಅವರು ತಿಳಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಬಿ.ಎ.ಬಸವರಾಜು, ಶಿವಮೊಗ್ಗ ಮಾದರಿ ನಗರವಾಗಿ ಅಭಿವೃದ್ಧಿಗೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ನಗರದಲ್ಲಿರುವ ಎಲ್ಲಾ ಬೀದಿ ದೀಪಗಳನ್ನು ಬದಲಾಯಿಸಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಪ್ರಥಮ ಹಂತದಲ್ಲಿ 22 ಸಾವಿರ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪಿಪಿಪಿ ಮಾದರಿಯ ಈ ಯೋಜನೆಯಿಂದಾಗಿ ವಿದ್ಯುತ್ ಗಣನೀಯ ಪ್ರಮಾಣದಲ್ಲಿ ಉಳಿತಾಯವಾಗಲಿದ್ದು, 7ವರ್ಷಗಳ ಉಚಿತ ನಿರ್ವಹಣೆ ಇರಲಿದೆ ಎಂದರು.
ವಾಜಪೇಯಿ ಬಡಾವಣೆ ಸಮಸ್ಯೆ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾಜಪೇಯಿ ಬಡಾವಣೆ ಸಮಸ್ಯೆಗೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಈಗಾಗಲೇ ಅಡ್ವಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಪ್ರಕರಣ ಹಿಂತೆಗೆದುಕೊಳ್ಳಲು ಮನವಿ ಮಾಡಲಾಗಿದೆ ಎಂದರು.
ಜನರ ಸಹಭಾಗಿತ್ವ ಅತಿ ಅಗತ್ಯ
ಜನರ ಸಹಭಾಗಿತ್ವ ಇದ್ದರೆ ಮಾತ್ರ ಯಾವುದೇ ಕಾಮಗಾರಿ ಯಶಸ್ವಿಯಾಗಲು ಸಾಧ್ಯವಿದೆ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಸಂಘ ರಚಿಸಿ ಅವುಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕು. ರಾಜೇಂದ್ರ ನಗರದಲ್ಲಿ ನೀರಿನ ಕಾಲುವೆಗೆ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ಸ್ಥಳೀಯರೇ ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಮನೆಗಳ ತ್ಯಾಜ್ಯ ನೀರು ನೇರವಾಗಿ ಕಾಲುವೆ ಸೇರುವಂತೆ ಸಂಪರ್ಕ ಕಲ್ಪಿಸಿದ್ದರೆ ಅದನ್ನು ತೆರವುಗೊಳಿಸಿ ನಿವಾಸಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಮಳೆಗಾಲದಲ್ಲಿ ಎಲ್ಲಿಯೂ ನೀರು ಕಟ್ಟಿ ನಿಂತು ಕೃತಕ ನೆರೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾಜಕಾಲುವೆ ಒತ್ತುವರಿಯಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಅವರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಸುವರ್ಣಾ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422