ರಿಪ್ಪನ್‌ಪೇಟೆ: ಹೊಂಬುಜ ಜೈನ ಮಠದಲ್ಲಿ ಶ್ರೀ ಪಾರ್ಶ್ವನಾಥ, ಶ್ರೀಪದ್ಮಾವತಿ ದೇವಿಯ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ನಿತ್ಯ ವಿಧಿ ಸಹಿತ ಮಹಾ ನೈವೇದ್ಯ ಪೂಜೆ ನೆರವೇರಿತು. (Humcha Padmavati Devi)

ಬೆಳಗ್ಗೆಯಿಂದ ವಿಶೇಷ ಪೂಜೆ
ಬೆಳಿಗ್ಗೆಯಿಂದಲೇ ದೇವಸ್ಥಾನದ ಪ್ರಧಾನ ಪುರೋಹಿತರಾದ ಪದ್ಮರಾಜ ಇಂದ್ರ ಹಾಗೂ ಸಹ ಪುರೋಹಿತ ವರ್ಗವು ನಿತ್ಯವಿಧಿ ಸಹಿತ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಅಭಿಷೇಕ, ಪೂಜಾ ವಿಧಿ-ವಿಧಾನಗಳನ್ನು ಶಾಸ್ರೋಕ್ತವಾಗಿ ನೆರವೇರಿಸಿದರು.
ಪದ್ಮಾವತಿ ದೇವಿಯ ಉತ್ಸವ ಮೂರ್ತಿಯು ದೇಗುಲದ ಒಳ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ದೇವಸ್ಥಾನದ ಮುಂಭಾಗದಲ್ಲಿ 41 ಅಡಿ ಎತ್ತರದ ಪಂಚವರ್ಣಗಳಿಂದ ಕೂಡಿದ ಧರ್ಮ ಪತಾಕೆಯ ಬಾವುಟಗಳಿಂದ ಅಲಂಕೃತಗೊಂಡ ಮಹಾರಥದಲ್ಲಿ ಮಧ್ಯಾಹ್ನ 12.27ರ ಮೂಲ ನಕ್ಷತ್ರದಲ್ಲಿ ಮಾತೆ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯನ್ನು ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ವರ್ಯಾ ಸ್ವಾಮೀಜಿ ಅವರ ನೇತೃತ್ವದಲ್ಲಿ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು.
ವೈಭವದ ರಥೋತ್ಸವ
ಮಂಗಳ ವಾದ್ಯ ಸಹಿತ ಆಶ್ವ ಆನೆ ಸ್ವಾಗತ, ನೆರೆದ ಭಕ್ತರ ಭಕ್ತಿ ಪರವಶತೆಯ ಜೈಕಾರದೊಂದಿಗೆ ವಿರಾಜಮಾನ ಪದ್ಮಾವತಿಯ ತೇರನ್ನೆಳೆಯಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ ಸಾಗಿತು.

ಜಾತ್ರೆಗೆ ಬಂದ ಭಕ್ತರ ದಾಹವನ್ನು ಇಂಗಿಸಲು ಸೇವಾಕರ್ತರು ಒಂದೆಡೆ ಮಜ್ಜಿಗೆ, ಲಿಂಬು ಪಾನಕ ಮುಂತಾದ ತಂಪು ಪಾನೀಯ ವಿತರಿಸಿದರು. ಇನ್ನೂ ಕೆಲವರು ಸಿಹಿ, ಹಣ್ಣುಗಳನ್ನು ಹಂಚುತ್ತ ಜನರ ದಣಿವನ್ನು ನಿವಾರಿಸುತಿದ್ದರು. ಮಠದ ಎಂದಿನ ಅನ್ನ ಪ್ರಸಾದದ ಜತೆಗೆ ಅಲ್ಲಲ್ಲಿ ದಾನಿಗಳಿಂದ ಅನ್ನ ಸಂತರ್ಪಣೆ ನಡೆಯಿತು.
ಇದನ್ನೂ ಓದಿ – ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?
ಇಂಪಾಲ, ಗೋಕಾಕ, ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಮಹೋತ್ಸವದಲ್ಲಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ದೇವಿಯ ಆಶೀರ್ವಾದದಿಂದ ದೇಶದಲ್ಲಿ ಶಾಂತಿ ನೆಲೆಸಿ, ಸಮಾನತೆ ಮೂಡಲಿ. ಕಾಲಕಾಲಕ್ಕೆ ಮಳೆ ಬೆಳೆಗಳು ಸರಾಗವಾಗಿ, ಸರ್ವರ ಬದುಕು ಸಂವೃದ್ಧಿಯಾಗಲಿ ಎಂದರು.


About The Editor
ನಿತಿನ್ ಆರ್.ಕೈದೊಟ್ಲು






