ಶಿವಮೊಗ್ಗ: ಮೊಬೈಲ್ ಹಾಗೂ ದಾಖಲೆಗಳನ್ನು ಕಳೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಕಷ್ಟದಲ್ಲಿದ್ದ 19 ವರ್ಷದ ಯುವತಿಯನ್ನು ಅಕ್ಕ ಪಡೆ ಸಿಬ್ಬಂದಿ ರಕ್ಷಿಸಿ ಸುರಕ್ಷಿತವಾಗಿ ತಾಯಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಬಸ್ ನಿಲ್ದಾಣದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಅಕ್ಕ ಪಡೆ ಪೊಲೀಸ್ ಸಿಬ್ಬಂದಿ ಒಂಟಿಯಾಗಿ ಕುಳಿತಿದ್ದ ಯುವತಿಯನ್ನು ವಿಚಾರಿಸಿದ್ದಾರೆ. ಅರಸೀಕೆರೆ ನಿವಾಸಿಯಾದ ಆಕೆ ಶಿವಮೊಗ್ಗಕ್ಕೆ ಬಂದಿದ್ದಾಗ ತನ್ನ ಮೊಬೈಲ್, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆ ಕಳೆದುಕೊಂಡಿರುವುದಾಗಿ ತಿಳಿಸಿದ್ದಾಳೆ. ಮನೆಯವರಿಗೆ ವಿಷಯ ತಿಳಿಸಲು ಹಾಗೂ ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ಕಂಗಾಲಾಗಿ ಕುಳಿತಿದ್ದರಿಂದ ಆಕೆಯನ್ನು ರಕ್ಷಣೆ ಮಾಡಲಾಗಿದೆ.

ಯುವತಿಯಿಂದ ಆಕೆಯ ತಾಯಿಯ ದೂರವಾಣಿ ಸಂಖ್ಯೆ ಪಡೆದು ಸಂಪರ್ಕಿಸಿದ್ದಾರೆ. ವಿಷಯ ತಿಳಿದು ಶಿವಮೊಗ್ಗಕ್ಕೆ ಬಂದ ತಾಯಿಗೆ ಯುವತಿಯನ್ನು ಒಪ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾಲಕಿಯನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಮಹಿಳಾ ಅಧಿಕಾರಿಗಳ ವಶದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಕ್ಕ ಪಡೆ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.