ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಆಗಸ್ಟ್ 2021
ಮಲೆನಾಡಿಗರ ಬಾಯಲ್ಲಿ ನೀರೂರಿಸುತ್ತಿರುವ ಅಪ್ಪೆಮಿಡಿಗೆ ಈಗ ಭಾರತೀಯ ಅಂಚೆ ಇಲಾಖೆ ಮಾನ್ಯತೆ ಲಭಿಸಿದೆ. ಅಂಚೆ ಲಕೋಟೆ ಮೇಲೆ ಅಪ್ಪೆ ಮಿಡಿಯ ಭಾವಚಿತ್ರ ಪ್ರಕಟಿಸಲಾಗಿದೆ. ಇವತ್ತು ಈ ವಿಶೇಷ ಅಂಚೆ ಲಕೋಟೆಯನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೇಂದ್ರ ಸರ್ಕಾರದ ಭೌಗೋಳಿಕ ಗುರುತಿಸುವಿಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಪ್ಪೆಮಿಡಿ ಇನ್ಮುಂದೆ ಅಂಚೆ ಇಲಾಖೆ ಲಕೋಟೆ ಮೇಲೆ ಕಾಣಿಸಲಿದೆ. ಪೋಸ್ಟ್ ಕವರ್ ಮೇಲೆ ಅಪ್ಪೆ ಮಿಡಿಯ ಭಾವಚಿತ್ರ ಪ್ರಕಟಿಸಲಾಗಿದೆ. ಲಕೋಟೆಯ ಹಿಂಭಾಗದಲ್ಲಿ ಅಪ್ಪೆ ಮಿಡಿಯ ವಿಶೇಷತೆ ಕುರಿತು ಮಾಹಿತಿ ಪ್ರಕಟವಾಗಿದೆ. ಅಲ್ಲದೆ ಅಪ್ಪೆ ಮಿಡಿ ಸಂರಕ್ಷಣೆ ಮಾಡುತ್ತಿರುವ ಸಾಗರದ ಕಾಕಲ್ ಇಂಡಸ್ಟ್ರಿಯ ವಿಳಾಸವನ್ನೂ ಪ್ರಕಟವಾಗಿದೆ.
ಜಗದ್ವಿಖ್ಯಾತಿಯಾಗುತ್ತೆ ಅಪ್ಪೆ ಮಿಡಿ
ಅಂಚೆ ಇಲಾಖೆಯ ಮಾನ್ಯತೆಯಿಂದಾಗಿ ಅಪ್ಪೆ ಮಿಡಿ ಈಗ ಜಗದ್ವಿಖ್ಯಾತಿ ಪಡೆಯಲಿದೆ. ಭಾರತದಾದ್ಯಂತ ಅಪ್ಪೆಮಿಡಿ ಭಾವಚಿತ್ರವಿರುವ ಕವರ್ ಲಭ್ಯವಾಗಲಿದೆ. ಅಲ್ಲದೆ ಭಾರತ ಸರ್ಕಾರ ಅಂತಾರಾಷ್ಟ್ರೀಯ ನಾಯಕರೊಂದಿಗೆ ಸಂಹವನಕ್ಕೆ ಈಗ ಕವರ್ ಬಳಕೆ ಮಾಡಲಿದೆ. ಹಾಗಾಗಿ ಅಪ್ಪೆಮಿಡಿಗೆ ಜಗದ್ವಿಖ್ಯಾತಿ ಲಭಿಸಲಿದೆ.
ಶಿವಮೊಗ್ಗದಲ್ಲಿ ಲಕೋಟೆ ಬಿಡುಗಡೆ
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇವತ್ತು ವಿಶೇಷ ಲಕೋಟೆ ಬಿಡುಗಡೆ ಮಾಡಲಾಯಿತು. ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್ ಮೂರ್ತಿ, ಅಪ್ಪೆ ಮಿಡಿ ಸಂರಕ್ಷಕ ಸಂಸ್ಥೆ ಕಾಕಲ್’ನ ಸಂಸ್ಥಾಪಕ ಗಣೇಶ್ ಕಾಕಲ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ. ರಾಮಚಂದ್ರ, ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕ ಜಿ.ಹರೀಶ್ ಅವರು ಲಕೋಟೆಯನ್ನು ಬಿಡುಗಡೆ ಮಾಡಿದರು.
ಯಾರಾರು ಏನೇನು ಹೇಳಿದರು?
ಸುಮಾರು 30 ವರ್ಷದ ಹೋರಾಟಕ್ಕೆ ಇವತ್ತು ನಮಗೆ ಜಯ ಸಿಕ್ಕಿದೆ. 30ಕ್ಕೂ ಹೆಚ್ಚು ತಳಿಯ ಅಪ್ಪೆ ಮಿಡಿ ಬೆಳೆದಿದ್ದೇವೆ. ಭೌಗೋಳಿಕ ಗುರುತಿಸುವಿಕೆ ಪಡೆದುಕೊಂಡಿದ್ದೇವೆ. ಈಗ ಅಂಚೆ ಲಕೋಟೆ ಮೇಲೆ ಅಪ್ಪೆ ಮಿಡಿಯ ಮಾಹಿತಿ ಪ್ರಕಟವಾಗಿರುವುದು ಸಂತಸ ತಂದಿದೆ ಅನ್ನುತ್ತಾರೆ ಕಾಕಲ್ ಇಂಡಸ್ಟ್ರೀಸ್’ನ ಗಣೇಶ್ ಕಾಕಲ್.
ಮಣ್ಣಿನ ಮಕ್ಕಳ ಜೊತೆಗೆ ಕೆಲಸ ಮಾಡಬೇಕು ಅನ್ನುವುದು ನಮ್ಮ ಉದ್ದೇಶ. ಆದ್ದರಿಂದ ಭೌಗೋಳಿಕ ಗುರುತಿಸುವಿಕೆ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಉತ್ಪನ್ನಗಳ ಮಾಹಿತಿ ಇರುವ ಲಕೋಟೆ ಬಿಡುಗಡೆ ಮಾಡಲಾಗುತ್ತಿದೆ ಅನ್ನುತ್ತಾರೆ ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ.
ಅಪ್ಪೆಮಿಡಿಯಲ್ಲಿ ಸುಮಾರು 90 ತಳಿಗಳಿವೆ. ಆದರೆ ಬಹುತೇಕರಿಗೆ ಅದನ್ನು ಬೆಳೆಯುವ ರೀತಿ ನೀತಿ ಗೊತ್ತಿಲ್ಲ. ಹಾಗಾಗಿ ಮರಗಳನ್ನು ಕಡಿದು ಹಾಳು ಮಾಡಲಾಗುತ್ತಿದೆ. ಅಪ್ಪೆಮಿಡಿಯ ರುಚಿ ಸವಿಯಬೇಕು ಎಂದರೆ ಪಶ್ಚಿಮ ಘಟ್ಟಕ್ಕೆ ಬರಬೇಕು ಅನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ರಾಮಚಂದ್ರ.
ಏನಿದು ಅಪ್ಪೆ ಮಿಡಿ?
ಪಶ್ಚಿಮಘಟ್ಟದಲ್ಲಿ ಅಪ್ಪೆಮಿಡಿ ಜನಜನಿತ. ಅಪ್ಪೆಮಿಡಿ ಉಪ್ಪಿನಕಾಯಿ ಜನರ ಬಾಯಲ್ಲಿ ನೀರೂರಿಸುತ್ತವೆ. ದೇಶ, ವಿದೇಶದಲ್ಲಿ ನೆಲೆಸಿರುವ ಮಲೆನಾಡಿಗರು ಅಪ್ಪೆಮಿಡಿ ಉಪ್ಪಿನಕಾಯಿ ಕೊಂಡೊಯ್ಯುತ್ತಾರೆ. ಮಲೆನಾಡಿನಲ್ಲಂತೂ ಪ್ರತಿ ಮನೆಯಲ್ಲೂ ಅಪ್ಪೆ ಮಿಡಿ ಉಪ್ಪಿನಕಾಯಿ ಇರುತ್ತದೆ.
ಅಪ್ಪೆ ಮಿಡಿ ಅನ್ನುವುದು ಉಪ್ಪಿನಕಾಯಿಗೆಂದೇ ಬೆಳೆಯುವ ವಿಶೇಷ ಮಾವಿನ ತಳಿ. ರುಚಿ ಮತ್ತು ಸುವಾಸನೆಗೆ ಇದು ಹೆಸರುವಾಸಿ. ಹೆಚ್ಚು ತೇವಾಂಶಭರಿತ ವಾತಾವರಣದಲ್ಲಿ ಮಾತ್ರ ಈ ತಳಿಯ ಮಾವು ಬೆಳೆಯುತ್ತದೆ. ಉತ್ತರ ಕನ್ನಡದ ನದಿತೀರ, ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್ ಪೇಟೆ, ಬೆಳಗಾವಿ ಜಿಲ್ಲೆಯ ಖಾನಾನಪುರ, ಲೋಂಡಾ, ಚಿತ್ತೂರು, ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಅಪ್ಪೆಮಿಡಿ ಮಾವು ಬೆಳೆಯಲಾಗುತ್ತದೆ. ಉತ್ತರ ಕನ್ನಡದ ಶಿರಸಿ, ಸಿದ್ಧಾಪುರ, ಶಿವಮೊಗ್ಗದ ಸಾಗರ, ರಿಪ್ಪನ್ ಪೇಟೆಯ ಅಪ್ಪೆಮಿಡಿ ಹೆಚ್ಚು ಜನಪ್ರಿಯ.
90ಕ್ಕೂ ಹೆಚ್ಚು ತಳಿಗಳಿವೆ
ಅಪ್ಪೆಮಿಡಿ ಮಾವಿನಲ್ಲಿ ಮಿಡಿ ಉದ್ದವಿರುತ್ತದೆ. ಇದರ ತೊಟ್ಟಿನಿಂದ ಬರುವ ಸೊನೆಗೆ ಬೆಂಕಿ ತಾಗಿಸಿದರೆ ಧಗಧಗ ಹೊತ್ತಿ ಉರಿಯುತ್ತದೆ. ಸುವಾಸನೆಭರಿತ ಈ ಅಪ್ಪೆಮಿಡಿಯಲ್ಲಿ ಸುಮಾರು 90 ತಳಿಗಳಿವೆ ಅನ್ನುತ್ತಾರೆ ಕಾಕಲ್ ಇಂಡಸ್ಟ್ರಿಯ ಗಣೇಶ್ ಕಾಕಲ್. ಪಶ್ಚಿಮ ಘಟ್ಟ ವಲಯದಲ್ಲಿ ಮಾತ್ರ ಬೆಳೆಯುವುದರಿಂದ ಕೇಂದ್ರ ಸರ್ಕಾರ ಇದನ್ನು ಭೌಗೋಳಿಕ ಗುರುತಿಸುವಿಕೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.
ಭೌಗೋಳಿಕ ಗುರುತಿಸುವಿಕೆ ಪಡೆದ ಉತ್ಪನ್ನಕ್ಕೆ ಅದ್ಯತೆ
ಭೌಗೋಳಿಕ ಗುರುತಿಸುವಿಕೆ ಪಡೆದ ಉತ್ಪನ್ನಗಳನ್ನು ಗುರುತಿಸಿ, ಅಂಚೆ ಲಕೋಟೆ ಮೇಲೆ ಅವುಗಳ ಭಾವಚಿತ್ರ ಮತ್ತು ಮಾಹಿತಿಯನ್ನು ಅಂಚೆ ಲಕೋಟೆ ಮೇಲೆ ಪ್ರಕಟಿಸಲಾಗುತ್ತಿದೆ. ಇಂತಹ ಬೆಳೆ ಮತ್ತು ಉತ್ಪನ್ನಗಳನ್ನು ದೇಶಾದ್ಯಂತ ಜನರಿಗೆ ಪರಿಚಯಿಸಲು ಅಂಚೆ ಇಲಾಖೆ ವ್ಯವಸ್ಥೆ ಮಾಡಿದೆ. ಇಂತಹ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಅಂಚೆ ಇಲಾಖೆ ವತಯಿಂದ ವಿಶೇಷ ನೆರವು ಕೂಡ ಕೊಡಲಾಗುತ್ತದೆ ಎಂದು ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್ ಮೂರ್ತಿ ತಿಳಿಸಿದ್ದಾರೆ.
ಅಪ್ಪೆಮಿಡಿಗೆ ಅಂಚೆ ಇಲಾಖೆ ನೀಡಿರುವ ಗೌರವ ಮಲೆನಾಡಿಗರು ಅದರಲ್ಲೂ ಅಪ್ಪೆ ಮಿಡಿ ಉಪ್ಪಿನಕಾಯಿ ಪ್ರಿಯರ ಮೆಚ್ಚುಗೆ ಗಳಿಸಿದೆ. ಅಲ್ಲದೆ ಅಪ್ಪೆಮಿಡಿ ಉಪ್ಪಿನಕಾಯಿ ಘಮ ಮತ್ತು ರುಚಿ ದೇಶಾದ್ಯಂತ ಪಸರಿಸಲಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200