ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 NOVEMBER 2023
SHIMOGA : ನಗರದಲ್ಲಿ ದಿನೇ ದಿನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು ಪಾರ್ಕಿಂಗ್ ಸಮಸ್ಯೆ ಉಲ್ಬಣಗೊಂಡಿದೆ. ಅದರಲ್ಲು ಕುವೆಂಪು ರಸ್ತೆ ಸುತ್ತಮುತ್ತ ಕಾರುಗಳ ಪಾರ್ಕಿಂಗ್‌ಗೆ ಸ್ಪರ್ಧೆ ಶುರುವಾಗಿದೆ. ಇದರಿಂದ ನಾನಾ ಸಮಸ್ಯೆಗಳು ಎದುರಾಗಿವೆ.
ವಾಹನ ಪಾರ್ಕಿಂಗ್‌ನದ್ದೇ ಸವಾಲು
ಕುವೆಂಪು ರಸ್ತೆಯಲ್ಲಿ ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳ ಸಂಖ್ಯೆಯೆ ಹೆಚ್ಚು. ಹಾಗಾಗಿ ವಾಹನ ದಟ್ಟಣೆಯು ಹೆಚ್ಚಿದೆ. ಶಿವಮೂರ್ತಿ ಸರ್ಕಲ್‌ನಿಂದ ಜೈಲ್ ವೃತ್ತದವರೆಗೆ ರಸ್ತೆಯ ಇಕ್ಕೆಲಗಳು ಪಾರ್ಕಿಂಗ್ ಸ್ಥಳವಾಗಿ ಬದಲಾಗಿದೆ. ರಸ್ತೆಯ ಉದ್ದಕ್ಕು ಕಾರುಗಳು ಸಾಲಾಗಿ ನಿಂತಿರುತ್ತವೆ. ಕಚೇರಿ, ಅಸ್ಪತ್ರೆಗೆ ಬರುವವರು ನಿತ್ಯ ರಸ್ತೆ ಬದಿಯಲ್ಲಿ ಕಾರುಗಳನ್ನು ನಿಲ್ಲಿಸುತ್ತಾರೆ. ಹಾಗಾಗಿ ಇತರೆ ವಾಹನಗಳ ಪಾರ್ಕಿಂಗ್‌ಗೆ ಜಾಗ ಸಿಗುತ್ತಿಲ್ಲ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಒಂದೇ ದಿನ 400 ಮಂದಿ ಪ್ರಯಾಣ, ಎಲ್ಲೆಲ್ಲಿಗೆ ಎಷ್ಟು ಜನ ತೆರಳಿದರು?
ಸೆಲ್ಲರ್‌ಗಳಿಲ್ಲದೆ ಸಮಸ್ಯೆ ಉಲ್ಬಣ
ಬೃಹತ್ ಕಟ್ಟಡಗಳ ಸೆಲ್ಲರ್‌ಗಳಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ ಈ ಭಾಗದ ಬಹುತೇಕ ಕಟ್ಟಡಗಳ ಸೆಲ್ಲರ್‌ಗಳು ವಾಣಿಜ್ಯ ಕಾರಣಕ್ಕೆ ಬಳಕೆಯಾಗುತ್ತಿವೆ. ಕೆಲವು ಕಟ್ಟಡಗಳ ಸೆಲ್ಲರ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶವಿದೆ. ಆದರೆ ಕಟ್ಟಡದಲ್ಲಿರುವ ಕಚೇರಿಯ ಸಿಬ್ಬಂದಿಯ ವಾಹನಗಳ ನಿಲುಗಡೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.
PHOTO : ಕುವೆಂಪು ರಸ್ತೆಯಲ್ಲಿ ವಾಹನ ದಟ್ಟಣೆ
ಪಾರ್ಕಿಂಗ್ ಪ್ರಾಬ್ಲಂ ಬೆನ್ನಿಗೆ ನೂರೆಂಟು ಸಮಸ್ಯೆ
ವಾಹನ ದಟ್ಟಣೆಯಿಂದಾಗಿ ಕುವೆಂಪು ರಸ್ತೆ ಮತ್ತು ಸುತ್ತಮುತ್ತಲು ಹತ್ತಾರು ಸಮಸ್ಯೆ ಉಲ್ಬಣಗೊಂಡಿದೆ. ವಾಹನ ಪಾರ್ಕಿಂಗ್‌ಗೆ ಜಾಗ ಸಿಗದಿರುವುದು ಅಥವಾ ಅಂಡಿಗಳ ಬಾಗಿಲಿಗೆ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ವ್ಯಾಪಾರ, ವಹಿವಾಟಿಗೆ ತೊಂದರೆಯಾಗುತ್ತಿದೆ. ರಸ್ತೆ ಬದಿ ಜಾಗ ಸಿಗದೆ ಕೆಲವರು ಫುಟ್‌ಪಾತ್‌ಗಳ ಮೇಲೆ ವಾಹನ ನಿಲ್ಲಿಸುತ್ತಿದ್ದು, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.
PHOTO : ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರುಗಳ ಪಾರ್ಕಿಂಗ್
ಕುವೆಂಪು ರಸ್ತೆಯಲ್ಲಿ ಪಾರ್ಕಿಂಗ್‌ಗೆ ಸ್ಥಳ ಸಿಗದೆ ಸುತ್ತಮುತ್ತಲ ವಿವಿಧ ರಸ್ತೆಗಳಿಗೆ ವಾಹನಗಳನ್ನು ಕೊಂಡೊಯ್ದು ನಿಲ್ಲಿಸಲಾಗುತ್ತಿದೆ. ತಿಲಕನಗರ, ದುರ್ಗಿಗುಡಿ ರಸ್ತೆ, ಚನ್ನಪ್ಪ ಲೇಔಟ್, ಅಚ್ಚುತರಾವ್ ಬಡಾವಣೆಗಳ ರಸ್ತೆಗಳಲ್ಲಿ ಕಾರುಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಕಿರಿದಾದ ರಸ್ತೆಗಳು, ಮನೆ ಗೇಟ್ ಮುಂದೆ ಕಾರುಗಳನ್ನು ನಿಲ್ಲಿಸುತ್ತಿರುವುದರಿಂದ ಈ ಬಡಾವಣೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನು, ಮನೆಗಳ ಗೇಟ್ ಮುಂದೆ ಬೇರೆ ವಾಹನಗಳು ನಿಲುಗಡೆ ತಪ್ಪಿಸಲು ಮನೆ ಮಾಲೀಕರು ಬೆಳಗ್ಗೆ ತರಾತುರಿಯಲ್ಲಿ ತಮ್ಮದೇ ವಾಹನಗಳನ್ನು ಹೊರತೆಗೆದು ನಿಲ್ಲಿಸುತ್ತಿದ್ದಾರೆ.
ಪಾರ್ಕಿಂಗ್‌ಗೆ ಪರ್ಯಾಯ ಯೋಚನೆ ಅಗತ್ಯ
ಕುವೆಂಪು ರಸ್ತೆಯಲ್ಲಿ ಕಾರುಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕುರಿತು ಯೋಜಿಸಬೇಕಿದೆ. ಇಲ್ಲವಾದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ ಪಾರ್ಕಿಂಗ್ ಸ್ಥಳವಾಗಿ ಮಾರ್ಪಡು ಮಾಡಲಾಯಿತು. ಆದರೆ ಮ್ಯಾಕ್ಸ್ ಆಸ್ಪತ್ರೆ ರಸ್ತೆಯಲ್ಲಿ ಎರಡು ಕನ್ಸರ್‌ವೆನ್ಸಿಗಳಲ್ಲಿ ಮಾತ್ರ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಉಳಿದೆಡೆ ಜನ ವಾಹನ ನಿಲ್ಲಿಸಲು ಸೂಕ್ತ ಭದ್ರತೆ ಇಲ್ಲ ಎಂದು ಭಯಪಡುತ್ತಿದ್ದಾರೆ.
PHOTO : ನೋ ಪಾರ್ಕಿಂಗ್ ಜೋನ್‌ನಲ್ಲಿಯು ಕಾರುಗಳ ಪಾರ್ಕಿಂಗ್ ಅನಿವಾರ್ಯ
ಕನ್ಸರ್‌ವೆನ್ಸಿಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಕುವೆಂಪು ರಸ್ತೆಯಲ್ಲಿ ತಕ್ಕಮಟ್ಟಿಗೆ ಸಂಚಾರ ದಟ್ಟಣೆ ನಿಯಂತ್ರಿಸಬಹುದಾಗಿದೆ. ಇಲ್ಲವಾದಲ್ಲಿ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗಲಿದೆ.
PHOTO : ಇತರೆ ವಾಹನಗಳಿಗೆ ಪಾರ್ಕಿಂಗ್ ಮಾಡಲು ಸ್ಥಳಾವಕಾಶದ ಕೊರತೆ
PHOTO : ಕುವೆಂಪು ರಸ್ತೆಯ ಎರಡು ಬದಿಯಲ್ಲೂ ಕಾರು ಪಾರ್ಕಿಂಗ್
PHOTO : ಕನ್ಸರ್‌ವೆನ್ಸಿಗಳಲ್ಲಿ ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ವಾಹನಗಳ ಪಾರ್ಕಿಂಗ್‌ಗೆ ಜನರ ನಿರಾಸಕ್ತಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422