ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 JULY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಚಕ್ರ, ಸಾವೆಹಕ್ಲು ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ನೀಡಿರುವ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಕ್ರ, ಸಾವೆಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಿ, ಮನವಿ ಸಲ್ಲಿಸಲಾಯಿತು.
ಸಂತ್ರಸ್ಥರ ಭೂಮಿಗೆ ಬೇಲಿ, ಮಾರಾಟಕ್ಕೆ ಯತ್ನ
ತಾಲೂಕಿನ ಅಗಸವಳ್ಳಿ ಗ್ರಾಮದ ಸರ್ವೆ ನಂ. 167ರಲ್ಲಿ ಮುಳುಗಡೆ ಸಂತ್ರಸ್ತರಿಗಾಗಿ 1148 ಎಕರೆ ಜಮೀನು ಮೀಸಲಿರಿಸಿದೆ. ಇದರಲ್ಲಿ 470 ಎಕರೆ ಕೃಷಿಭೂಮಿಯನ್ನು ಸರ್ಕಾರ ಗಡಿ ನಿರ್ಧರಿಸಿ ಬ್ಲಾಕ್ ನಂ. 1ರಿಂದ 187ರ ವರೆಗೆ ತಲಾ 2 ರಿಂದ 3 ಎಕರೆಯಂತೆ ಮುಳುಗಡೆ ಸಂತ್ರಸ್ತರಿಗೆ ಖಾತೆ ಮಾಡಿ ಹಂಚಿದೆ. ಆದರೆ ಈ ಜಮೀನಿಗೆ ಕೆಲ ವ್ಯಕ್ತಿಗಳು ಅಕ್ರಮವಾಗಿ ಬೇಲಿ ಹಾಕಿ ಮಾರಾಟ ಮಾಡುತ್ತಿದ್ದಾರೆ.
ಅಕ್ರಮ ದಂಧೆಕೋರರು ಯಾವುದೆ ಖಾತೆ, ಪಹಣಿ, ದಾಖಲೆ ಇಲ್ಲದೆ ಜೆಸಿಬಿ ಮೂಲಕ ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದಾರೆ. ಜಮೀನಿಗೆ ಪ್ರವೇಶಿಸದಂತೆ ಸಂತ್ರಸ್ಥರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಮಲೆನಾಡು ರೈತ ಹೋರಾಟ ಸಮಿತಿಯ ತಿ.ನಾ.ಶ್ರೀನಿವಾಸ, ಚಕ್ರಾ, ಸಾವೆಹಕ್ಲು ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಉಮೇಶ್, ಶ್ರೀಕರ, ತಿಮ್ಮಪ್ಪ, ಕೆ.ಸಿ. ವೆಂಕಟೇಶ್ ಮತ್ತಿತರರಿದ್ದರು.
ಬಾಡಿ ಬಿಲ್ಡರ್ ಸಾವಿನ ನ್ಯಾಯಾಂಗ ತನಿಖೆಗೆ ಒತ್ತಾಯ
BHADRAVATHI : ನಗರದ ಬಾಡಿ ಬಿಲ್ಡರ್, ಕರ್ನಾಟಕ ಕೇಸರಿ ಪ್ರಶಸ್ತಿ ವಿಜೇತ ಹೊಸ ಬುಳ್ಳಾಪುರ ವಾಸಿ ರತಿಲಕುಮಾರ್ (27) ಸಾವು ಸಹಜವಲ್ಲ. ಅದು ಪೂರ್ವ ನಿಯೋಜಿತ ಕೊಲೆ. ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಮೃತನ ತಂದೆ ವಿ.ಇಂದ್ರೇಶ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಪೊಲೀಸರು ಎಫ್ ಐಆರ್ ಹಾಕಿ ಆರೋಪಿಗಳನ್ನು ಬಂಧಿಸಿಲ್ಲ. 14 ತಿಂಗಳಿಂದ ಆರೋಪಿಗಳ ಬಂಧನಕ್ಕಾಗಿ ಹೋರಾಟ ನಡೆಸುತ್ತಿದ್ದರೂ ನಿಷ್ಪ್ರಯೋಜಕವಾಗಿದೆ. ಎಸ್‌ಪಿ, ಎಎಸ್‌ಪಿ, ಡಿಐಜಿ, ಐಜಿ, ಗೃಹಮಂತ್ರಿ, ಜಿಲ್ಲಾಸಚಿವ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿಗೂ ದೂರು ಸಲ್ಲಿಸಿದ್ದು, ಪ್ರಯೋಜನವಾಗಿಲ್ಲ. ಪೊಲೀಸರು ರಾಜಕೀಯ ಒತ್ತಡದಿಂದ ಸಾಕ್ಷಿ ನಾಶಪಡಿಸಲು ಯತ್ನಿಸುತ್ತಿದ್ದಾರೆ. ತಕ್ಷಣ ಸೂಕ್ತ ತನಿಖೆನಡೆಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕೂಡಲಿ ಮಠದಲ್ಲಿ ಇಂದಿನಿಂದ ಚಾತುರ್ಮಾಸ್ಯ ವ್ರತ
HOLEHONNURU : ಕೂಡಲಿ ಶೃಂಗೇರಿ ಮಹಾಸಂಸ್ಥಾನ ಶಾರದಾ ಪೀಠದ ಶ್ರೀವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಹಾಗೂ ಕಿರಿಯ ಶ್ರೀಅಭಿನವ ಶಂಕರ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತವು ಜು.21ರಿಂದ ನ.15ರವರೆಗೆ ಶ್ರೀಮಠದಲ್ಲಿ ನಡೆಯಲಿದೆ. ನಿತ್ಯ ಮುಂಜಾನೆ 7ಕ್ಕೆ ಶಾರದಾಂಬೆಗೆ ವಿಶೇಷ ಅಭಿಷೇಕ ಹಾಗೂ ಕುಂಕುಮಾರ್ಚನೆ, 8.30ಕ್ಕೆ ಮಠದಲ್ಲಿರುವ ಎಲ್ಲ ಅಧಿಷ್ಠಾನಗಳಿಗೆ ವಿಶೇಷ ಪೂಜೆ, 9.30ಕ್ಕೆ ಸಾರ್ವಜನಿಕರಿಗೆ ಜಗದ್ಗುರುಗಳ ದರ್ಶನ ಹಾಗೂ ವಿದ್ವಾಂಸರಿಂದ ಘನಪಾರಾಯಣ. ಮಧ್ಯಾಹ್ನ 12ಕ್ಕೆ ಶ್ರೀ ಚಂದ್ರಮೌಳೀಶ್ವರ ಹಾಗೂ ವಿದ್ಯಾಶಂಕರಾದಿ ಸಂಸ್ಥಾನದ ಮೂಲದೇವರ (ಖಾಸಾ ಪೂಜೆ), ತೀರ್ಥ ವಿತರಣೆ. ಮಧ್ಯಾಹ್ನ 1.30ಕ್ಕೆ ಘನಪಾರಾಯಣ ವಿರಾಮ ಹಾಗೂ ಭೋಜನ ಪ್ರಸಾದ, ಸಂಜೆ 4ಕ್ಕೆ ಸಾರ್ವಜನಿಕರಿಗೆ ಜಗದ್ಗುರುಗಳಿಂದ ಪ್ರವಚನ ಹಾಗೂ ದರ್ಶನ, ಸಂಜೆ 5ಕ್ಕೆ ವಿದ್ವಾಂಸರಿಂದ ಘನಪಾರಾಯಣ ಹಾಗೂ ಶಾರದಾಂಬೆ ಸನ್ನಿಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಕ್ಕೆ ಘನಪಾರಾಯಣ ವಿರಾಮ ಹಾಗೂ ಮಹಾ ಮಂಗಳಾರತಿ ನಡೆಯಲಿವೆ. ಭಕ್ತಾಧಿಗಳು ಭಾಗವಹಿಸುವಂತೆ ಶ್ರೀಮಠದ ಪ್ರಕಟಣೆ ಕೋರಿದೆ.
ಇದನ್ನೂ ಓದಿ ⇓
ಹೊಸನಗರದಲ್ಲಿ ತಗ್ಗಿದ ಮಳೆ ಅಬ್ಬರ, ಚಕ್ರ, ಸಾವೇಹಕ್ಲುವಿನಿಂದ ನೀರು ಹೊರಕ್ಕೆ, ಎಲ್ಲೆಲ್ಲಿ ಎಷ್ಟಾಗಿದೆ ಮಳೆ?