SHIVAMOGGA LIVE NEWS | 22 NOVEMBER 2023
SHIMOGA : ಈದ್ ಮೆರವಣಿಗೆ ಸಂದರ್ಭ ರಾಗಿಗುಡ್ಡದಲ್ಲಿ ಸಂಭವಿಸಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಈ ಕೂಡಲೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಧೀರರಾಜ್ ಹೊನ್ನವಿಲೆ ಮೇಯರ್ ಅವರನ್ನು ಒತ್ತಾಯಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಧೀರರಾಜ್ ಹೊನ್ನವಿಲೆ ಕೇಳಿದ್ದೇನು?
ಈದ್ ಮೆರವಣಿಗೆ ಸಂದರ್ಭ ಶಾಂತಿನಗರದಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಪಾಲಿಕೆ ವತಿಯಿಂದ ಪರಿಹಾರ ನೀಡಬೇಕು. ಇನ್ನು, ಶಾಂತಿ ನಗರ ಸೂಕ್ಷ್ಮ ಪ್ರದೇಶವಾಗಿದ್ದು ಸಿಸಿ ಕ್ಯಾಮರಾ ಅಳವಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಅವರು ಆಯುಕ್ತರಿಗೆ ಎರಡು ಬಾರಿ ಪತ್ರ ಬರೆದಿದ್ದಾರೆ. ಇದಕ್ಕೆ ಆಯುಕ್ತರು ಯಾವುದೆ ಪ್ರತಿಕ್ರಿಯೆ ನೀಡಿಲ್ಲ ಎಂದು ಧೀರರಾಜ್ ಹೊನ್ನವಿಲೆ ಸಭೆಗೆ ತಿಳಿಸಿದರು.
ಇದನ್ನೂ ಓದಿ – ಸದ್ಯದಲೇ ಶಿವಮೊಗ್ಗದಿಂದ ಮತ್ತಷ್ಟು ಮಾರ್ಗಕ್ಕೆ ವಿಮಾನಯಾನ, ಇಲ್ಲಿದೆ ಸಂಸದರು ಹೇಳಿದ 5 ಪ್ರಮುಖಾಂಶ
ಪರಿಹಾರ ನೀಡಲು ಸಾಧ್ಯವಿಲ್ಲ
ಇದೆ ಸಂದರ್ಭ ಪೌರಾಡಳಿತ ಕಾನೂನುಗಳನ್ನು ಉಲ್ಲೇಖಿಸಿದ ಆಯುಕ್ತ ಮಾಯಣ್ಣ ಗೌಡ, ಗಲಭೆಗಳಿಂದ ಹಾನಿಗೆ ಪಾಲಿಕೆ ವತಿಯಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು. ಸರ್ಕಾರದ ವತಿಯಿಂದ ಪರಿಹಾರ ಬಿಡುಗಡೆಯಾಗಬೇಕು ಎಂದು ತಿಳಿಸಿದರು.
ಆಡಳಿತ, ಪ್ರತಿಪಕ್ಷಗಳ ಮಾತಿನ ಸಮರ
ಕಲ್ಲು ತೂರಾಟ ಪ್ರಕರಣ ಸಂಭವಿಸಿ ತಿಂಗಳುಗಳೆ ಕಳೆದೆದೆ. ಬಿಜೆಪಿಯವರು ರಾಜಕೀಯಕ್ಕಾಗಿ ಶಾಂತಿನಗರ ವಿಷಯ ಬಳಕೆ ಮಾಡಿಕೊಂಡರು. ಆದರೆ ಪರಿಹಾರ ವಿತರಿಸಿಲ್ಲ. ಪಾಲಿಕೆ ಬೊಕ್ಕಸ ಬರಿದಾಗಿದೆ. ಹಾಗಾಗಿ ಈತನಕ ಪರಿಹಾರ ವಿತರಣೆ ಮಾಡಿಲ್ಲ. ಈ ಕೂಡಲೆ ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ವಿರೋಧ ಪಕ್ಷ ಕಾಂಗ್ರೆಸ್ನ ಸದಸ್ಯರು ಮೇಯರ್ ಅವರನ್ನು ಆಗ್ರಹಿಸಿದರು. ಇದರಿಂದ ಕೆರಳಿದ ಆಡಳಿತರೂಢ ಬಿಜೆಪಿ ಸದಸ್ಯರು ಪಾಲಿಕೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ಸರ್ಕಾರದ ಬಳಿ ಹಣವಿಲ್ಲ ಎಂದು ತಿರುಗೇಟು ನೀಡಿದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಗದ್ದಲ ನಿರ್ಮಾಣವಾಯಿತು.
ಎಂಎಲ್ಎ ಹೇಳಿಕೆ, ಮತ್ತೆ ಗದ್ದಲ
ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಹಿಂದೂ ಸಮಾಜದ ಮೇಲೆ ದಾಳಿ ಮಾಡಿದವರಿಗೆ ಪರಿಹಾರ ನೀಡಬಾರದು. ಹಿಂದೂಗಳ ಮನೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದಸರಾ ಆಚರಣೆಗೆ ಸರ್ಕಾರ ಪರಿಹಾರ ನೀಡಿಲ್ಲ. ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಪಾಲಿಕೆ ವತಿಯಿಂದಲೆ ಪರಿಹಾರ ಘೋಷಣೆ ಮಾಡಿ ಎಂದು ಮೇಯರ್ ಅವರನ್ನು ಒತ್ತಾಯಿಸಿದರು. ಇದರಿಂದ ಕಾಂಗ್ರೆಸ್ ಸದಸ್ಯರು ಕೆರಳಿದರು. ಈ ವೇಳೆ ಮತ್ತೆ ಮಾತಿನ ಚಕಮಕಿ ನಡೆಯಿತು.
ಕೊನೆಗೆ ಮೇಯರ್ ಶಿವಕುಮಾರ್ ಅವರು, ಶಾಂತಿನಗರದಲ್ಲಿ ಹಾನಿಗೀಡಾದ ಮನೆಗಳಿಗೆ ಪಾಲಿಕೆ ವತಿಯಿಂದ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200