ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 ಏಪ್ರಿಲ್ 2022
ಇಂಧನ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ನಗರದ ಮಹಾವೀರ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿಲಿಂಡರ್, ಸ್ಕೂಟಿಗೆ ಹಾರ
ಅಡುಗೆ ಅನಿಲದ ಸಿಲಿಂಡರ್, ಸ್ಕೂಟಿಗೆ ಹೂವಿನ ಹಾರ ಹಾಕಿ, ತಟ್ಟೆ, ಜಾಗಟೆ ಬಡಿಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಕರೊನಾದಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದು ಇನ್ನೂ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸತತ ಬೆಲೆ ಏರಿಕೆ ಮಾಡುವ ಮೂಲಕ ಆಘಾತ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆಯಿಂದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಧನ ಬೆಲೆ ಏರಿಕೆ ಪರಿಣಾಮ ದಿನ ಬಳಕೆ ವಸ್ತುಗಳು ಸೇರಿ ಹಲವು ಉತ್ಪನ್ನಗಳ ದರವೂ ಹೆಚ್ಚಾಗಿದೆ. ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬೆಲೆ ಏರಿಕೆ ಸಾಮಾನ್ಯ ಎಂಬಂತಾಗಿದೆ ಎಂದು ದೂರಿದರು.
ತಿಂಗಳಲ್ಲಿ 9 ಭಾರಿ ಬೆಲೆ ಹೆಚ್ಚಳ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವ ಬದಲು ಹೆಚ್ಚಿಸುತ್ತಿದೆ. ಮಾರ್ಚ್ ತಿಂಗಳಲ್ಲಿ 9 ಬಾರಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಿ ಜನಸಾಮಾನ್ಯರ ಬದುಕು ಸುಗಮವಾಗಿ ಸಾಗುವಂತೆ ಮಾಡಬೇಕಿದ್ದ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಜನವಿರೋಧಿ ಕೇಂದ್ರ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಪಾಲಿಕೆ ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್, ಪ್ರಮುಖರಾದ ರಾಮೇಗೌಡ, ವೈ.ಎಚ್.ನಾಗರಾಜ್, ಚಂದ್ರ ಭೂಪಾಲ, ಸೌಗಂಧಿಕಾ, ಎಚ್.ಪಿ.ಗಿರೀಶ್, ಮಧುಸೂದನ್, ಚೇತನ್ ಇದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422